ADVERTISEMENT

ರಾಷ್ಟ್ರಪತಿ ಅಂಕಿತಕ್ಕೆ ಇರಿಸಿದ್ದ ಮಸೂದೆಗಳ ಬಗ್ಗೆ ರಾಜ್ಯಪಾಲರ ಜೊತೆ ಸಿಎಂ ಚರ್ಚೆ

ರಾಷ್ಟ್ರಪತಿಯ ಅಂಕಿತಕ್ಕೆ ಕಾದಿರಿಸಿದ್ದ ಐದು ಮಸೂದೆಗಳ ಕುರಿತು ವಿಚಾರ ವಿನಿಮಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 16:22 IST
Last Updated 22 ಜೂನ್ 2025, 16:22 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>
   

ಪ್ರಜಾವಾಣಿ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಭಾನುವಾರ ಸಂಜೆ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.

ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ ಅವರೂ ಮುಖ್ಯಮಂತ್ರಿಯವರ ಜೊತೆಗೆ ಇದ್ದರು.

ADVERTISEMENT

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಮತ್ತು ವಿವಿಧ ಕಾರ್ಯಕ್ರಮಗಳ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ (ಜೂನ್‌ 23) ಮುಖ್ಯಮಂತ್ರಿ ರಾಯಚೂರಿಗೆ ತೆರಳಲಿದ್ದಾರೆ. ಬಳಿಕ ಸಚಿವ ಸಂಪುಟದ ಸದಸ್ಯರ ಜೊತೆ ದೆಹಲಿಗೆ ಪ್ರಯಾಣ ಬೆಳೆಸಲಿರುವ ಮುಖ್ಯಮಂತ್ರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ.

ರಾಷ್ಟ್ರಪತಿಯ ಅಂಕಿತಕ್ಕೆ ರಾಜ್ಯಪಾಲರು ಕಾದಿರಿಸಿದ ಐದು ಮಸೂದೆಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ರಾಷ್ಟ್ರಪತಿ ಭವನಕ್ಕೆ ಕಳುಹಿಸಿದೆ. ರಾಷ್ಟ್ರಪತಿಯನ್ನು ಭೇಟಿಯ ವೇಳೆ ಈ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಲಿದ್ದಾರೆ. ರಾಷ್ಟ್ರಪತಿಯನ್ನು ಭೇಟಿಯಾಗಲಿರುವ ಕಾರಣ ರಾಜ್ಯಪಾಲರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

‘ರಾಷ್ಟ್ರಪತಿಯ ಅಂಕಿತಕ್ಕೆ ಕಾದಿರಿಸಿದ ಐದು ಮಸೂದೆಗಳಿಗೆ ಸಂಬಂಧಿಸಿದ ಕಡತದಲ್ಲಿ ರಾಜ್ಯಪಾಲರು ನೀಡಿರುವ ಕಾರಣಗಳು, ನಮೂದಿಸಿರುವ ಅಂಶಗಳ ಕುರಿತು ರಾಜ್ಯಪಾಲರಿಂದ ಮುಖ್ಯಮಂತ್ರಿ ಮಾಹಿತಿ ಪಡೆದರು. ರಾಜ್ಯ ಸರ್ಕಾರ ರೂಪಿಸಿರುವ ಮಸೂದೆಗಳನ್ನು ಹೇಗೆ ಸಮರ್ಥಿಸಿಕೊಳ್ಳಬೇಕು, ಅವುಗಳ ಜಾರಿಯ ಅವಶ್ಯಕತೆ ಕುರಿತು ರಾಷ್ಟ್ರಪತಿಗೆ ಮುಖ್ಯಮಂತ್ರಿ ಮನವರಿಕೆ ಮಾಡಲಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಯಾವೆಲ್ಲ ಮಸೂದೆಗಳು: 

* ಒಂದರಿಂದ ಐದನೇ ತರಗತಿವರೆಗೆ ಮಾತೃ ಭಾಷೆ ಮಾಧ್ಯಮದಲ್ಲೇ ಶಿಕ್ಷಣ ಕಡ್ಡಾಯವಾಗಿ ಕಲಿಸುವ ಕುರಿತ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ’

* ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ಕಲ್ಪಿಸಲು ಅವಕಾಶ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ತಿದ್ದುಪಡಿ (ಕೆಟಿಪಿಪಿ) ಮಸೂದೆ‌’

* ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ‘ಎ’ ವರ್ಗದ ದೇವಾಲಯಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯ ಶೇ 5ರಿಂದ ಶೇ 10ರಷ್ಟು ಆದಾಯವನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’

* ‘ಕರ್ನಾಟಕ ನೋಂದಣಿ ತಿದ್ದುಪಡಿ ಮಸೂದೆ’ ಮತ್ತು ‘ನೋಟರಿ ಕರ್ನಾಟಕ ತಿದ್ದುಪಡಿ ಮಸೂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.