ADVERTISEMENT

ಶ್ರೀರಾಮನ ಹೆಸರಲ್ಲಿ ಬಿಜೆಪಿಯವರ ರಾಜಕೀಯ ವಿರೋಧಿಸುತ್ತೇವೆ; ಸಿದ್ದರಾಮಯ್ಯ

ಜ. 22ರ ನಂತರ ಅಯೋಧ್ಯೆಗೆ ತೆರಳಿ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 11:33 IST
Last Updated 12 ಜನವರಿ 2024, 11:33 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಶಿವಮೊಗ್ಗ: 'ಶ್ರೀರಾಮಚಂದ್ರನ ಬಳಸಿಕೊಂಡು ಬಿಜೆಪಿ ಮಾಡುತ್ತಿರುವ ರಾಜಕೀಯವನ್ನು ನಾವು (ಕಾಂಗ್ರೆಸ್) ವಿರೋಧಿಸುತ್ತೇವೆ.

'ಜನವರಿ 22ರ ನಂತರ ಅಯೋಧ್ಯೆಗೆ ಭೇಟಿ ನೀಡಿ ನಾವೂ ಪೂಜೆ ಸಲ್ಲಿಸುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿರುವುದನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ನಾವು (ಕಾಂಗ್ರೆಸ್) ವಿರೋಧಿಸುತ್ತೇವೆ. ಹೊರತು ಶ್ರೀ ರಾಮಚಂದ್ರನನ್ನು ಅಲ್ಲ' ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಹಾಗೆಂದು ನಾವು ದೇವರನ್ನು ಬಳಸಿ ಬಿಜೆಪಿಯವರಂತೆ ರಾಜಕೀಯ ಮಾಡುವುದಿಲ್ಲ ಎಂದರು.

ಇದೇ ವೇಳೆ ಮೂರು ಡಿಸಿಎಂ ಹುದ್ದೆಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

'ಗ್ಯಾರಂಟಿ ಯೋಜನೆಗಳು ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಕುಮಾರಸ್ವಾಮಿ ಅಂದರೆ ಸುಳ್ಳು. ಸುಳ್ಳು ಅಂದರೆ ಕುಮಾರಸ್ವಾಮಿ. ಅವರ ಟೀಕೆಗೆ ನಾನು ಉತ್ತರಿಸುವುದಿಲ್ಲ' ಎಂದರು.

'ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು

ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಅವರ ಅವಧಿಯಲ್ಲಿ ಯಾವುದೇ ಗ್ಯಾರಂಟಿಗಳ ನೀಡಿಲ್ಲವಾದ್ದರಿಂದ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ' ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.