ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕುರಿತು ವಿಧಾನಸಭೆಯಲ್ಲಿ ಸೋಮವಾರ ಆಡಿದ ಮಾತು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಎಐಸಿಸಿ ವರಿಷ್ಠರ ಕುರಿತು ಮಾಡಿದ ಟೀಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯಿತು. ಜಿಂದಾಬಾದ್, ಮುರ್ದಾಬಾದ್, ಧಿಕ್ಕಾರ ಘೋಷಣೆಗಳು ಮತ್ತು ಪರಸ್ಪರ ಏಕವಚನದ ಬಳಕೆಯಿಂದ ಕಲಾಪ ಕಮರಿತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡುತ್ತಿದ್ದ ವೇಳೆ ಸಿದ್ದರಾಮಯ್ಯ ಅವರ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು, ತಮ್ಮ ನಾಯಕನ ಪರ ನಿಂತು ವಾಗ್ವಾದಕ್ಕೆ ಇಳಿದರು. ಕಲಾಪ ಅನೇಕ ಬಾರಿ ಗೊಂದಲದ ಗೂಡಾಯಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಹೊರ ಹೋಗಿದ್ದ ವೇಳೆಯಲ್ಲಿ ಈ ಗದ್ದಲ ಆರಂಭವಾಯಿತು. ಮರಳಿ ಬಂದ ಖಾದರ್ ಅವರು, ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿ ಎರಡೂ ಕಡೆಯ ಕೋಪವನ್ನು ತಣಿಸಿದರು. ಎರಡೂ ಕಡೆಯುವರೂ ಆಡಿದ್ದ ‘ಸೂಕ್ಷ್ಮ’ ಮಾತುಗಳನ್ನು ಕಡತದಿಂದ ತೆಗೆಸಿ ಮುಖ್ಯಮಂತ್ರಿಯವರು ಉತ್ತರ ಮುಂದುವರಿಸಲು ಅನುವು ಮಾಡಿಕೊಟ್ಟರು.
ಉತ್ತರ ನೀಡುವ ವೇಳೆ ಮುಖ್ಯಮಂತ್ರಿ, ‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಅಪರಾಧಗಳ ಸಂಖ್ಯೆ ಕಡಿಮೆ ಆಗಿವೆ’ ಎಂದರಲ್ಲದೇ, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯ ಅಪರಾಧಗಳ ಅಂಕಿ–ಅಂಶಗಳನ್ನು ವಿವರಿಸಿದರು. ಆ ಬಳಿಕ ಅವರು ‘ಎಲ್ಲ ಅಪರಾಧಗಳು, ದ್ವೇಷ, ರಾಜಕೀಯ ಅಪರಾಧ ಹೆಚ್ಚಲು ಸಂಘ ಪರಿವಾರದ ಸಂಘಟನೆಗಳೇ ಕಾರಣ’ ಎಂದು ಹೇಳಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು.
ತಕ್ಷಣವೇ ಎದ್ದು ನಿಂತ ಬಿಜೆಪಿ ಸದಸ್ಯರು, ‘ಮುಖ್ಯಮಂತ್ರಿಯವರು ಆರ್‌ಎಸ್‌ಎಸ್ ಕುರಿತು ಆಡಿದ ಮಾತನ್ನು ವಾಪಸ್ ಪಡೆಯಬೇಕು’ ಎಂದು ಮುಗಿಬಿದ್ದರು. ಇದನ್ನು ಲೆಕ್ಕಿಸದ ಸಿದ್ದರಾಮಯ್ಯ ‘ಅಲ್ಲಿರುವ (ಬಿಜೆಪಿ) ಹೆಚ್ಚಿನವರು ಆರ್‌ಎಸ್ಎಸ್‌ನವರಲ್ಲ. ಅಶೋಕನೂ ಆರ್‌ಎಸ್‌ಎಸ್ ಅಲ್ಲ. ಆತ ಚೆಡ್ಡಿ ಹಾಕಿಲ್ಲ’ ಎಂದು ಹೇಳಿದ್ದು, ಅಶೋಕ ಸೇರಿ ಬಿಜೆಪಿ ಸದಸ್ಯರನ್ನು ಮತ್ತಷ್ಟು ಆಕ್ರೋಶಕ್ಕೆ ದೂಡಿತು. ಆಗ ಗದ್ದಲ ತಾರಕಕ್ಕೇರಿ, ‘ನಾನೂ ಆರ್‌ಎಸ್‌ಎಸ್’ ಎಂಬ ಘೋಷಣೆಗಳನ್ನು ಬಿಜೆಪಿ ಸದಸ್ಯರು ಹಾಕಿದರು.
ಕಾಂಗ್ರೆಸ್ ಸದಸ್ಯರು ಆರ್‌ಎಸ್ಎಸ್ ವಿರೋಧಿ ಘೋಷಣೆಗಳನ್ನು ಮೊಳಗಿಸಿದರು.
ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ ಮತ್ತು ಹರೀಶ್ ಪೂಂಜಾ ಅವರು, ‘ನೀವು ನಿಷೇಧಿತ ಸಂಘಟನೆ ಪಿಎಫ್‌ಐ ಪರ ಇದ್ದೀರಿ. ಅವರ ಮೇಲೆ ಇದ್ದ ಕೇಸುಗಳನ್ನು ತೆಗೆದು ಹಾಕಿದ್ದೀರಿ. ಅವರ ಏಜೆಂಟ್‌ಗಳು’ ಎಂದು ಅಬ್ಬರಿಸಿದರು.
‘ಗೊತ್ತಿದೆ ಕೂತ್ಕೊಳ್ರಿ, ನಿಮಗೆ ಗಲಾಟೆ ಮಾಡಿ ಅಂತ ಹೇಳಿ ಕಳಿಸಿಕೊಟ್ಟವರು ಯಾರೆಂದು ನನಗೆ ಗೊತ್ತು. ನೀವೆಲ್ಲ ಆರ್‌ಎಸ್ಎಸ್‌ನವರಲ್ಲ, ನಿಮ್ಮನ್ನ ಎತ್ತಿ ಕಟ್ಟಿದ್ದಾರೆ. ನಾನೇನು ಪಿಎಫ್‌ಐ ಬೆಂಬಲಿಸಿಲ್ಲ. ಆ ಸಂಘಟನೆಯ ಯಾವುದೇ ವ್ಯಕ್ತಿಯ ವಿರುದ್ಧ ಕೇಸನ್ನು ಹಿಂದಕ್ಕೆ ಪಡೆದಿಲ್ಲ ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
‘ಮುಖ್ಯಮಂತ್ರಿ ಆರ್‌ಎಸ್‌ಎಸ್ ಕುರಿತು ಆಡಿದ ಮಾತನ್ನು ಹಿಂದಕ್ಕೆ ಪಡೆಯುವವರೆಗೆ ಸದನ ನಡೆಯಲು ಬಿಡುವುದಿಲ್ಲ ಮತ್ತು ಹೇಳಿಕೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ’ ಎಂದು ಅಶೋಕ ಅವರು ಏರಿದ ಧ್ವನಿಯಲ್ಲಿ ಹೇಳಿದರು.
‘ಗಾಂಧೀಜಿ ಹತ್ಯೆ ಆದಾಗ ವಲ್ಲಭಬಾಯ್ ಪಟೇಲ್ ಏನು ಹೇಳಿದ್ದರು ಗೊತ್ತಾ? ನಿಮಗೆಲ್ಲ ಹೆದ್ರಿಕೊಳ್ಳಲ್ಲ. ನಿಮ್ಮನ್ನು ಎದುರಿಸಲು ನಾನು ತಯಾರಿದ್ದೇನೆ. ನನ್ನ ಹೇಳಿಕೆ ಹಿಂದಕ್ಕೆ ಪಡೆಯುವುದಿಲ್ಲ. ಏನಾಗುತ್ತೋ ನೋಡೋಣ’ ಎಂದು ಸಿದ್ದರಾಮಯ್ಯ ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದಾಗ, ‘ನಾವೂ ತಯಾರಿದ್ದೇವೆ’ ಎಂದು ಅಶೋಕ ಪ್ರತಿ ಸವಾಲು ಹಾಕಿದರು.
ಆಗ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಬಿಜೆಪಿಯವರು ತಮ್ಮ ಮಕ್ಕಳನ್ನು ಆರ್‌ಎಸ್‌ಎಸ್ ಶಾಖೆಗೆ ಕಳುಹಿಸುವುದಿಲ್ಲ. ಕಂಡವರ ಮಕ್ಕಳನ್ನು ಶಾಖೆಗೆ ಕಳುಹಿಸಿ ಹಾಳು ಬಾವಿಗೆ ನೂಕುತ್ತಾರೆ’ ಎಂದರು.
ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ವಿ.ಸುನಿಲ್‌ಕುಮಾರ್, ‘ಖರ್ಗೆ ಅವರೇ ನಿಮ್ಮ ಮಕ್ಕಳು ದಲಿತ ಕಾಲೊನಿಯಲ್ಲಿ ಇದ್ದಾರೆಯೇ, ಅಲ್ಲಿಗೆ ಕಳುಹಿಸುತ್ತೀರೇ? 50 ವರ್ಷಗಳಿಂದ ಸದಾಶಿವನಗರದಲ್ಲಿ ಕುಳಿತು ದಲಿತ ಕಾಲೊನಿಗಳ ಬಗ್ಗೆ ಮಾತನಾಡುತ್ತೀರಿ ನಿಮಗೆ ನಾಚಿಕೆ ಆಗಬೇಕು’ ಗುಡುಗಿದರು.
ಕಾಂಗ್ರೆಸ್‌ಗೆ ಪಾಕಿಸ್ತಾನದ ನಂಟು ಇದೆ ಎಂಬ ಅರ್ಥದಲ್ಲಿ ಬಿಜೆಪಿ ಸದಸ್ಯರು ಆರೋಪ ಮಾಡಿದಾಗ, ಪ್ರಿಯಾಂಕ್ ಅವರು ಪ್ರಧಾನಿ ಮೋದಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಜತೆ ಇದ್ದ ಚಿತ್ರವನ್ನು ಪ್ರದರ್ಶಿಸಿದರು. ಇದಕ್ಕೆ ಪ್ರತಿಯಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಶ್ಮೀರದ ಭಯೋತ್ಪಾದಕ ಯಾಸೀನ್ ಮಲಿಕ್ ಜತೆಗಿದ್ದ ಚಿತ್ರ ಪ್ರದರ್ಶಿಸಿದರು.
ಸಭಾಧ್ಯಕ್ಷ ಸ್ಥಾನದಲ್ಲಿದ್ದ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಕಲಾಪವನ್ನು ತಹಬಂದಿಗೆ ತರಲು ಸಾಧ್ಯವಾಗದೇ ಎರಡು ಬಾರಿ ಕಲಾಪವನ್ನು ಮುಂದೂಡಿದರು. ಎರಡನೇ ಬಾರಿಗೆ ಮುಂದೂಡಿದಾಗ ಹೊರಗೆ ಹೋಗಿದ್ದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ದೌಡಾಯಿಸಿ ಬಂದು ಆಡಳಿತ– ವಿರೋಧ ಪಕ್ಷಗಳ ನಾಯಕರನ್ನು ಮಾತುಕತೆಗೆ ಆಹ್ವಾನಿಸಿ, ಕಲಾಪವನ್ನು ಆವರಿಸಿಕೊಂಡಿದ್ದ ಬಿಸಿಯನ್ನು ತಣ್ಣಗಾಗಿಸಿದರು.
ಆರ್‌ಎಸ್‌ಎಸ್ ಕುರಿತು ಮುಖ್ಯಮಂತ್ರಿಯವರು ಆಡಿದ ಮಾತು ಅಸಂಸದೀಯವಲ್ಲ. ನಿಮ್ಮ ಸಮಸ್ಯೆ ಏನು? ಇದೇ ತರಹ ಆಡಿದ್ರೆ ರಾಜ್ಯದ ಜನ ಏನಂದುಕೊಳ್ಳುತ್ತಾರೆಕೆ.ಎಂ.ಶಿವಲಿಂಗೇಗೌಡ, ಸಭಾಧ್ಯಕ್ಷ ಪೀಠದಿಂದ
ಆರ್ಎಸ್ಎಸ್ ಬಗ್ಗೆ ಇಲ್ಲಿ ಮಾತನಾಡಬೇಡಿ . ಧಮ್ ಇದ್ರೆ ಹೊರಗೆ ಹೋಗಿ ಮಾತಾಡಿ, ಸದನದ ರಕ್ಷಣೆ ಪಡೆದು ಇಲ್ಲಿ ಮಾತನಾಡಬೇಡಿಆರ್.ಅಶೋಕ, ವಿರೋಧಪಕ್ಷದ ನಾಯಕ
ನಿಮಗೆಲ್ಲ ಹೆದರಿಕೊಳ್ಳಲ್ಲ.ನಿಮ್ಮನ್ನು ಎದುರಿಸಲು ನಾನು ತಯಾರಿದ್ದೇನೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಏನಾಗುತ್ತೋ ನೋಡೋಣಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.