ADVERTISEMENT

ಬೀದಿ ನಾಯಿಗಳನ್ನು ಸ್ಥಳಾಂತರಿಸಿ: ಸುಪ್ರೀಂ ಕೋರ್ಟ್‌ ಆದೇಶಕ್ಕೆ ಸಿ.ಎಂ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 17:38 IST
Last Updated 12 ಆಗಸ್ಟ್ 2025, 17:38 IST
   

ಬೆಂಗಳೂರು: ‘ಮಾನವ ಸಮಾಜವು ತನಗೆ ಮತ್ತು ಪ್ರಾಣಿಗಳ ಭದ್ರತೆಯನ್ನು ಎತ್ತಿಹಿಡಿಯುವ ಪರಿಹಾರ ಕಂಡುಕೊಳ್ಳುತ್ತದೆಯೇ ಹೊರತು ಬೀದಿನಾಯಿಗಳನ್ನು ಉಪದ್ರವ ಎಂದು ಪರಿಗಣಿಸಿ, ಹೊರಹಾಕುವುದಿಲ್ಲ. ಹಾಗೆ ಮಾಡುವುದು ಕ್ರೌರ್ಯ ಎನಿಸಿಕೊಳ್ಳುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೆಹಲಿಯಿಂದ ಬೀದಿನಾಯಿಗಳನ್ನು ಒಂದು ವಾರದಲ್ಲಿ ಹೊರಹಾಕಿ ಎಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಖಂಡಿಸಿ ರಾಹುಲ್‌ ಗಾಂಧಿ ಅವರು ಮಾಡಿರುವ ‘ಎಕ್ಸ್‌’ ಪೋಸ್ಟ್‌ ಅನ್ನು ಸಿದ್ದರಾಮಯ್ಯ ಅವರು ರಿಪೋಸ್ಟ್‌ ಮಾಡಿದ್ದಾರೆ.

‘ನಮ್ಮೆದುರು ಸಂತಾನಶಕ್ತಿ ಹರಣ ಚಿಕಿತ್ಸೆ, ಲಸಿಕೆ, ಆರೈಕೆ ಕೇಂದ್ರಗಳಂತಹ ಪರಿಹಾರ ಕ್ರಮಗಳಿವೆ. ಭಯಗ್ರಸ್ತ ಮನಸ್ಥಿತಿಯಿಂದ ಕೈಗೊಂಡ ಕ್ರಮಗಳು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ’ ಎಂದಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ದೆಹಲಿ ಮತ್ತು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ ಎಂದು ಸುಪ್ರೀಂ ಕೋರ್ಟ್‌ ಅಧಿಕಾರಿಗಳಿಗೆ ಸೋಮವಾರ ನಿರ್ದೇಶನ ನೀಡಿತ್ತು.

ಬೀದಿ ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಆ ನಾಯಿಗಳು ಮತ್ತೆ ಬೀದಿಗೆ ಬರಕೂಡದು ಎಂದು ತಾಕೀತು ಮಾಡಿತ್ತು. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್‌.ಮಹಾದೇವನ್‌ ಅವರ ನೇತೃತ್ವದ ನ್ಯಾಯಪೀಠವು ಅಧಿಕಾರಿಗಳಿಗೆ ಈ ರೀತಿಯ ಕೆಲವು ಸೂಚನೆಗಳನ್ನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.