ಬೆಂಗಳೂರು: ಎಂಟು ಜಿಲ್ಲೆಗಳ ಉಸ್ತುವಾರಿ ಸಚಿವರು, ಆ ಜಿಲ್ಲೆಗಳನ್ನು ಪ್ರತಿನಿಧಿಸುವ ಸಚಿವರು, ಶಾಸಕರ ಜೊತೆ ಬುಧವಾರ ಪ್ರತ್ಯೇಕವಾಗಿ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾ ಕ್ಷೇತ್ರಗಳಲ್ಲಿನ ಸಮಸ್ಯೆಗಳು, ಯೋಜನೆಗಳ ಅನುಷ್ಠಾನ, ವಿಶೇಷವಾಗಿ ಹಂಚಿಕೆ ಆಗಲಿರುವ ₹ 50 ಕೋಟಿ ಅನುದಾನದ ಶೇಕಡಾ 100ರಷ್ಟು ಸದ್ಬಳಕೆ ಕುರಿತು ಚರ್ಚೆ ನಡೆಸಿದರು.
ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಇಡೀ ದಿನ ವಿಚಾರವಿನಿಮಯ ನಡೆಸಿದ ಮುಖ್ಯಮಂತ್ರಿ, ಸಚಿವರು– ಶಾಸಕರ ನಡುವೆ ವಿಶ್ವಾಸ ಮೂಡಿಸಿ, ಬಾಂಧವ್ಯ ಗಟ್ಟಿಗೊಳಿಸುವ ಕಸರತ್ತು ನಡೆಸಿದರು. ಶಾಸಕರ ಬೇಡಿಕೆ, ಅಹವಾಲುಗಳಿಗೆ ಕಿವಿಯಾದ ಅವರು, ಸಚಿವರು ನೀಡಿದ ಸಮರ್ಥನೆ, ಸಮಜಾಯಿಷಿಗಳನ್ನು ಆಲಿಸಿ ಸಲಹೆ, ಸೂಚನೆಗಳನ್ನು ನೀಡಿದರು.
ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ, ಜಿಲ್ಲೆಯ ಸಚಿವರೂ ಶಾಸಕರ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದರು.
‘ರಾಜ್ಯದ ಆರ್ಥಿಕತೆಯು ಕೇಂದ್ರ ಸರ್ಕಾರದ ಅಸಹಕಾರ, ಹಿಂದಿನ ಸರ್ಕಾರದ ಆರ್ಥಿಕ ದುರಾಡಳಿತ, ಅಶಿಸ್ತುಗಳಿಂದಾಗಿ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ ಆಡಳಿತ ಉತ್ತಮ ದಿಕ್ಕಿನ ಕಡೆ ನಡೆಸುತ್ತಿದ್ದೇವೆ. ಎಲ್ಲ ಸಂಕಷ್ಟಗಳ ನಡುವೆಯೂ ವಿಶೇಷ ಅನುದಾನದ ರೂಪದಲ್ಲಿ ₹ 50 ಕೋಟಿ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕರಿಗೆ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.
‘ಚುನಾವಣೆಗೂ ಮೊದಲು ನೀಡಿದ ಆಶ್ವಾಸನೆಗಳ ಪ್ರಕಾರ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದೇವೆ. ನಾವು ಜಾರಿಗೆ ತಂದ ಯೋಜನೆಗಳಿಂದಾಗಿ ತಲಾ ಆದಾಯದ ವಿಚಾರದಲ್ಲಿ ನಮ್ಮ ರಾಜ್ಯ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ನಡೆದಿರುವ ಅಧ್ಯಯನಗಳ ಪ್ರಕಾರ ‘ಶಕ್ತಿ’ ಯೋಜನೆಯಿಂದ ಮಹಿಳೆಯರ ಉದ್ಯೋಗದ ಪ್ರಮಾಣ ಬೆಂಗಳೂರಿನಲ್ಲಿ ಶೇಕಡಾ 23ರಷ್ಟು, ಧಾರವಾಡದಲ್ಲಿ ಶೇಕಡಾ 21ರಷ್ಟು ಹೆಚ್ಚಾಗಿದೆ’ ಎಂದಿದ್ದಾರೆ.
‘ರಾಜ್ಯದ ಜನರ ತಲಾ ಆದಾಯ ಇಡೀ ದೇಶದಲ್ಲಿ ನಂಬರ್ ಒನ್ ಆಗಿರುವುದನ್ನು ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸಬೇಕು. ರಾಜ್ಯದ ಆರ್ಥಿಕ ಸಾಧನೆಗೆ ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳು ನೇರ ಕಾರಣವಾಗಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಂಡು, ಜನರಿಗೆ ಅರ್ಥ ಮಾಡಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ಆರ್ಥಿಕ ಸ್ಥಿತಿಗತಿಯ ಚಿತ್ರಣವನ್ನು ಸಭೆಯಲ್ಲಿ ತೆರೆದಿಟ್ಟ ಮುಖ್ಯಮಂತ್ರಿ, ‘ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಲೋಪಗಳನ್ನು ಸರಿ ಮಾಡುವ ಜೊತೆಗೆ ಆರ್ಥಿಕತೆಗೆ ಚೈತನ್ಯ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ವರದಿಯ ನೆಪದಲ್ಲಿ ಶೇ 23ರಷ್ಟು ತೆರಿಗೆ ಪಾಲು ಕಡಿಮೆ ಮಾಡಿದೆ. ರಾಜ್ಯಕ್ಕೆ ಐದು ವರ್ಷಗಳಲ್ಲಿ ₹ 68 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಇದನ್ನೂ ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸಬೇಕು’ ಎಂದಿದ್ದಾರೆ.
‘ಯೂರಿಯಾ ಪೂರೈಕೆ ವಿಚಾರದಲ್ಲಿ ಕೇಂದ್ರದ ಅಸಹಕಾರ ಇದ್ದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ದುರುದ್ದೇಶ ಹಾಗೂ ನಾಚಿಕೆಗೇಡಿತನದ ಕ್ರಮ. ಇದನ್ನು ಕ್ಷೇತ್ರದ ಜನರಿಗೆ ನೀವು ಅರ್ಥ ಮಾಡಿಸಬೇಕು. ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು’ ಎಂದೂ ಕಿವಿಮಾತು ಹೇಳಿದ್ದಾರೆ.
ಮುಖ್ಯಮಂತ್ರಿ ಮಂಗಳವಾರ ನಡೆಸಿದ ಸಭೆಯಲ್ಲಿ ತುಮಕೂರು ಜಿಲ್ಲೆಯ ಶಾಸಕರು ಮತ್ತು ಸಚಿವರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಸಚಿವ ಕೆ.ಎನ್. ರಾಜಣ್ಣ ಮತ್ತು ಶಾಸಕ ಎಸ್.ಆರ್. ಶ್ರೀನಿವಾಸ್ ನಡುವೆ ಮಾತಿನ ಚಕಮಕಿ ನಡೆದಿದೆ.
‘ನನ್ನ ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನದ ಅವಕಾಶ ತಪ್ಪಿಸಿ ಪಾವಗಡ ಶಾಸಕ ವೆಂಕಟೇಶ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವಂತೆ ರಾಜಣ್ಣ ಮಾಡಿದರು. ಪಕ್ಷನಿಷ್ಠರಾಗಿ ನಾವು ಕೆಲಸ ಮಾಡುತ್ತೇವೆ. ನಮ್ಮ ಕೆಲಸ ಕಾರ್ಯಗಳೇ ಆಗದಿದ್ದರೆ ಹೇಗೆ’ ಎಂದು ಶ್ರೀನಿವಾಸ್ ಪ್ರಶ್ನಿಸಿದಾಗ ರಾಜಣ್ಣ ಸಮಜಾಯಿಷಿ ನೀಡಲು ಮುಂದಾದರು. ಈ ವೇಳೆ ಇಬ್ಬರೂ ಏರುದನಿಯಲ್ಲಿ ಬೈದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.