ADVERTISEMENT

ಎಸ್‌ಟಿಗೆ ಪರಿವಾರ, ತಳವಾರ ಸೇರ್ಪಡೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 15:34 IST
Last Updated 9 ಫೆಬ್ರುವರಿ 2024, 15:34 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಹರಿಹರ: ‘ರಾಜ್ಯದಲ್ಲಿರುವ ಪರಿವಾರ, ತಳವಾರ ಸಮುದಾಯದವರನ್ನೂ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.

ADVERTISEMENT

‘ಕೇಂದ್ರ ಸರ್ಕಾರವು ಪರಿವಾರ, ತಳವಾರ ಜಾತಿಗಳನ್ನು ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳಲ್ಲಿರುವ ಈ ಸಮುದಾಯದವರನ್ನು ಎಸ್‌ಟಿಗೆ ಸೇರಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಮುದಾಯದವರ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲು ಸೂಚಿಸುತ್ತೇನೆ’ ಎಂದು ಹೇಳಿದರು.

‘ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರು ನಾಮಕರಣ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಗೆ ಶೇ 17 ಮತ್ತು ಪ.ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದರಿಂದ ಲಭ್ಯವಾಗುವ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಬೇಕು. 2013ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಂಬಳ, ಸಾಲ ಬಿಟ್ಟು ಜನಸಂಖ್ಯೆಗೆ ಅನುಗುಣವಾಗಿ ಈ ಸಮುದಾಯಗಳಿಗೆ ಹಣ ಮೀಸಲಿಡುವಂತೆ ಕಾನೂನು ಮಾಡಿದ್ದೆ. ಕೇಂದ್ರವೂ ಈ ಕಾನೂನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

‘₹650 ಕೋಟಿ ತಾತ್ಕಾಲಿಕ ಬರ ಪರಿಹಾರ’

‘ಬರದ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಕುಡಿಯುವ ನೀರು, ಮೇವು, ಉದ್ಯೋಗ ಒದಗಿಸಲಾಗುತ್ತಿದೆ. ರಾಜ್ಯದಿಂದ ₹860 ಕೋಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದ್ದು, ಇದನ್ನು ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೂ ಜಮೆ ಮಾಡಲಾಗಿದೆ. ಜನರು ಗುಳೇ ಹೋಗದಂತೆ ತಡೆಯಲು ಹಾಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘₹2000ದಂತೆ ಅಂದಾಜು 34 ಲಕ್ಷ ರೈತರಿಗೆ ₹650 ಕೋಟಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ. 5 ತಿಂಗಳು ಕಳೆದರೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ. ರಾಜ್ಯದ ಬಿಜೆಪಿ ನಾಯಕರು ಕೇವಲ ಭಾಷಣ ಮಾಡುತ್ತಾರೆಯೇ ಹೊರತು, ಕೇಂದ್ರದೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿ ಕೊಡುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.