ADVERTISEMENT

ಬ್ಯಾಂಕ್‌ ಅಧಿಕಾರಿಗಳಿಗೆ ಸಿ.ಎಂ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 20:32 IST
Last Updated 17 ಸೆಪ್ಟೆಂಬರ್ 2018, 20:32 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಕಲಬುರ್ಗಿ: ‘ಸಾಲ ಮರು ಪಾವತಿಸುವಂತೆ ರೈತರಿಗೆ ಕಿರುಕುಳ ನೀಡಿದರೆ ಬ್ಯಾಂಕ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಅಫಜಲಪುರ ತಾಲ್ಲೂಕು ಚವಡಾಪುರದಲ್ಲಿ ಮಳೆ ಅಭಾವದಿಂದ ಹಾನಿಗೊಳಗಾಗಿರುವ ತೊಗರಿ ಹೊಲವನ್ನು ಸೋಮವಾರ ವೀಕ್ಷಿಸಿದ ಅವರು ರೈತರಿಗೆ ಅಭಯ ನೀಡಿದರು.

‘ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಸಾಲ ಮರು ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಸಾಲ ಯಾವಾಗ ಮನ್ನಾ ಆಗುತ್ತದೆ’ ಎಂದು ರೈತ ಮಡಿವಾಳಪ್ಪ ಪ್ರಶ್ನಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಇನ್ನೊಂದು ವಾರದಲ್ಲಿ ಎಲ್ಲವೂ ಸರಿಯಾಗುತ್ತದೆ. ರೈತರಿಗೆ ಕಿರುಕುಳ ನೀಡದಂತೆ ಬ್ಯಾಂಕ್ ಅಧಿಕಾರಿಗಳಿಗೆ ಇನ್ನೊಮ್ಮೆ ಎಚ್ಚರಿಕೆ ನೀಡಲಾಗುವುದು. ವಿಜಯಪುರದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ’ ಎಂದರು.

400 ಸಾಂಸ್ಕೃತಿಕ ಭವನ:‘ರಾಜ್ಯದ 1,500 ತಾಂಡಾಗಳ ಪೈಕಿ ಮೊದಲ ಹಂತದಲ್ಲಿ ₹30 ಕೋಟಿ ವೆಚ್ಚದಲ್ಲಿ 400 ತಾಂಡಾಗಳಲ್ಲಿ ಸೇವಾಲಾಲ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ ಮತ್ತು ಪುನಶ್ಚೇತನ ಕೈಗೊಳ್ಳಲಾಗುವುದು’ ಎಂದು, ಕಲಬುರ್ಗಿಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ತಿಳಿಸಿದರು.

‘2019–20ರಲ್ಲಿ 500 ಹಾಗೂ 2020–21ರಲ್ಲಿ 600 ತಾಂಡಾಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಒಟ್ಟು ₹122.50 ಕೋಟಿ ವೆಚ್ಚವಾಗಲಿದೆ’ ಎಂದರು.

ದೇವಸ್ಥಾನಕ್ಕೆ ಭೇಟಿ

ಅಫಜಲಪುರ ತಾಲ್ಲೂಕು ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ದತ್ತಾತ್ರೇಯನ ದರ್ಶನ ಪಡೆದು, ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.