ADVERTISEMENT

ಕವಿ ಡಾ. ಸಿದ್ದಲಿಂಗಯ್ಯ ನಿಧನಕ್ಕೆ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಸಂತಾಪ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 13:21 IST
Last Updated 11 ಜೂನ್ 2021, 13:21 IST
   

ಬೆಂಗಳೂರು: ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯಸಂತಾಪ ಸೂಚಿಸಿದ್ದಾರೆ.

ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ. ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು.

ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಅವರ ನಿಧನದಿಂದ, ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.

ADVERTISEMENT

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಕವಿ ಸಿದ್ದಲಿಂಗಯ್ಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ‌‌ ಸಮಾನತೆಯ ಹೋರಾಟವನ್ನು‌ ಮುನ್ನಡೆಸಿದ್ದ ದಲಿತ ಕವಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಮತ್ತು ನನ್ನ ಆತ್ಮೀಯ ಮಿತ್ರ ಸಿದ್ದಲಿಂಗಯ್ಯನವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.

ಸಾವನ್ನು ಮೀರಿದ ಸಾಹಿತ್ಯದ ಮೂಲಕ ಅವರು ಅಜರಾಮರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.