ADVERTISEMENT

ಭಾರತವು ಪ್ರಾದೇಶಿಕ ವ್ಯಾಪಾರ ಒಪ್ಪಂದವನ್ನು ಬೆಂಬಲಿಸಲಿ: ರಾಜ್‌ ಭಲಾ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:30 IST
Last Updated 9 ಏಪ್ರಿಲ್ 2021, 19:30 IST

ಬೆಂಗಳೂರು: ‘ಭಾರತವು ಪ್ರಾದೇಶಿಕ ವ್ಯಾಪಾರ ಒಪ್ಪಂದವನ್ನು (ಆರ್‌ಟಿಎ) ಬೆಂಬಲಿಸಬೇಕು. ಜೊತೆಗೆ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಅಮೆರಿಕದ ಕಾನ್ಸಾಸ್‌ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜ್‌ ಭಲಾ ಅಭಿಪ್ರಾಯಪಟ್ಟರು.

ಸಿಎಂಆರ್‌ ಕಾನೂನು ವಿಶ್ವವಿದ್ಯಾಲಯ ಶುಕ್ರವಾರ ಹಮ್ಮಿಕೊಂಡಿದ್ದ ‘ಅಂತರರಾಷ್ಟ್ರೀಯ ವ್ಯಾಪಾರ ಕಾನೂನಿನಲ್ಲಿ ಹೊಸ ಪ್ರವೃತ್ತಿಗಳು’ ಕುರಿತ ಆನ್‌ಲೈನ್‌ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಆರ್‌ಟಿಎ ಒಪ್ಪಂದದಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ. ಈ ಕಾರಣಕ್ಕಾಗಿ ಭಾರತವು ಇದನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿದೆ. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಹೊಸ ಕ್ರಾಂತಿಯಾಗಬೇಕು. ದೇಶೀಯವಾಗಿ ಹಲವು ಸುಧಾರಣೆಗಳಾದಾಗ ಮಾತ್ರ ಇದು ಸಾಧ್ಯ’ ಎಂದರು.

ADVERTISEMENT

ಬೆರ್ನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೀಟರ್‌ ಎಲ್‌.ಎಚ್‌.ವ್ಯಾನ್‌ ಡೆನ್‌ ಬಾಷ್‌ ‘21ನೇ ಶತಮಾನವು ಸವಾಲುಗಳ ಯುಗ. ಹೀಗಾಗಿ ಅಂತರರಾಷ್ಟ್ರೀಯ ವ್ಯಾಪಾರ ನೀತಿಯ ಪುಸ್ತಕದಲ್ಲಿ ಕೆಲ ಬದಲಾವಣೆಗಳಾಗಬೇಕಿದೆ. ಡಿಜಿಟಲೀಕರಣವು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯಲ್ಲಿ ಹೊಸ ಮನ್ವಂತರ ಸೃಷ್ಟಿಸಲಿದೆ’ ಎಂದು ಹೇಳಿದರು.

‘ಹವಾಮಾನ ಬದಲಾವಣೆ, ರಾಷ್ಟ್ರೀಯ ಭದ್ರತೆ, ಮಾನವ ಹಕ್ಕುಗಳು ಮತ್ತು ಇ–ವಾಣಿಜ್ಯ. ಇವು ಅಂತರರಾಷ್ಟ್ರೀಯ ವ್ಯಾಪಾರ ಮಾತುಕತೆಯ ಹೊಸ ಅಂಶಗಳಾಗಿವೆ’ ಎಂದು ಡೆನ್‌ ಬಾಷ್‌ ಹಾಗೂ ರಾಜ್‌ ಭಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.