ADVERTISEMENT

1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ‘ಟ್ಯಾಬ್ಲೆಟ್‌’ ಭಾಗ್ಯ

ಪದವಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೊಡುಗೆ

ರಾಜೇಶ್ ರೈ ಚಟ್ಲ
Published 17 ಡಿಸೆಂಬರ್ 2020, 20:12 IST
Last Updated 17 ಡಿಸೆಂಬರ್ 2020, 20:12 IST
ಡಾ.ಸಿ.ಎನ್‌. ಅಶ್ವತ್ಥನಾರಾಯಣ
ಡಾ.ಸಿ.ಎನ್‌. ಅಶ್ವತ್ಥನಾರಾಯಣ   
""

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ, ಸರ್ಕಾರಿ ಪಾಲಿಟೆಕ್ನಿಕ್‌ಗಳ ಪ್ರಥಮ ಮತ್ತು ದ್ವಿತೀಯ ಹಾಗೂ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ ಸೇರಿ ಒಟ್ಟು 1,55,396 ವಿದ್ಯಾರ್ಥಿಗಳಿಗೆ ‘ಡಿಜಿಟಲ್‌ ಕಲಿಕೆ’ ಯೋಜನೆಯ ಭಾಗವಾಗಿ ಅಂದಾಜು ₹ 155.40 ಕೋಟಿ ವೆಚ್ಚದಲ್ಲಿ ತಲಾ ₹10 ಸಾವಿರ ಮೌಲ್ಯದ ಟ್ಯಾಬ್ಲೆಟ್ (ಪರ್ಸನಲ್‌ ಮೊಬೈಲ್‌ ಕಂಪ್ಯೂಟರ್‌) ಉಚಿತವಾಗಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 44,326 ವಿದ್ಯಾರ್ಥಿಗಳಿದ್ದಾರೆ. ಉಳಿದಂತೆ, ಇತರ ಹಿಂದುಳಿದ ವರ್ಗಗಳ 91,210, ಅಲ್ಪಸಂಖ್ಯಾತರ 10,977, ಸಾಮಾನ್ಯ ವಿಭಾಗದ 8,883 ವಿದ್ಯಾರ್ಥಿಗಳಿದ್ದಾರೆ. ಯೋಜನೆಗೆ ತಗಲುವ ವೆಚ್ಚವನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ (₹ 44.32 ಕೋಟಿ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (₹ 91.21 ಕೋಟಿ) ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ (₹ 10.98 ಕೋಟಿ) ಅನುದಾನ ಪಡೆಯಲು ಹಾಗೂ ಉಳಿದ ಸಾಮಾನ್ಯ ವಿದ್ಯಾರ್ಥಿಗಳಿಗೆ ತಗಲುವ ವೆಚ್ಚವನ್ನು (₹ 8.88 ಕೋಟಿ) ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಭರಿಸಲು ಮುಂದಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈಗಾಗಲೇ ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆ ಸಹಮತ ಸೂಚಿಸಿದೆ. ಆದರೆ, ಪ್ರಸಕ್ತ ಬಜೆಟ್‌ನಲ್ಲಿ ಆಯಾ ಇಲಾಖೆಗಳಿಗೆ ಮಂಜೂರು ಮಾಡಿದ ಅನುದಾನದಲ್ಲಿಯೇ ಈ ವೆಚ್ಚವನ್ನು ಭರಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿ ಅನುದಾನ ನೀಡುವುದಿಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ.

ADVERTISEMENT

ಮುಂಬರುವ ಜನವರಿ ತಿಂಗಳಲ್ಲಿ ಕನಿಷ್ಠ ಅರ್ಹ ಬಿಡ್‌ದಾರರಿಗೆ ನಿಯಮಾನುಸಾರ ಟ್ಯಾಬ್ಲೆಟ್‌ ಖರೀದಿಸಿ ಪೂರೈಸಲು ಕಾರ್ಯಾದೇಶ ನೀಡಲು ಉದ್ದೇಶಿಸಲಾಗಿದೆ. ಅದೇ ತಿಂಗಳಿನಲ್ಲಿಯೇ ಎಲ್ಲ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ನೀಡುವುದರಿಂದ ಡಿಜಿಟಲ್‌ ಕಲಿಕೆಯ ಮತ್ತು ಆನ್‌ಲೈನ್‌ ಕಲಿಕೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ. ಟ್ಯಾಬ್ಲೆಟ್‌ಗಳಲ್ಲಿ ವೈಫೈ ಮತ್ತು ಸಿಮ್‌ ಬಳಕೆಯಿಂದ ಇಂಟರ್‌ನೆಟ್‌ ಸಂಪರ್ಕ ಸಾಧಿಸಬಹುದು. ಜೊತೆಗೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ನಡುವೆ ಇರುವ ಡಿಜಿಟಲ್‌ ತಂತ್ರಜ್ಞಾನದ ಅರಿವಿನಲ್ಲಿನ ಅಂತರ (ಡಿಜಿಟಲ್‌–ಡಿವೈಡ್‌) ಅಳಿಸಿ ಹಾಕುವ ಉದ್ದೇಶ ಹೊಂದಲಾಗಿದೆ ಎಂದೂ ಇಲಾಖೆಯ ಮೂಲಗಳು ಸಮರ್ಥನೆ ನೀಡಿವೆ.

2019–20ನೇ ಸಾಲಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಥಮ ವರ್ಷ ಪದವಿಯ ಅಂದಾಜು 1.10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ ಟಾಪ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.