ADVERTISEMENT

ಕೋವಿಡ್ ಸಂಕಷ್ಟದಿಂದ ಚೇತರಿಕೆಯತ್ತ ಕರ್ನಾಟಕ: ಡಿಸಿಎಂ ಅಶ್ವತ್ಥನಾರಾಯಣ ಸಂತಸ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 14:20 IST
Last Updated 30 ಆಗಸ್ಟ್ 2020, 14:20 IST
ಸಿ.ಎನ್. ಅಶ್ವತ್ಥನಾರಾಯಣ
ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ಕೋವಿಡ್-19 ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಮುಂಚೂಣಿ ರಾಜ್ಯವೆಂಬ ಹೆಗ್ಗಳಿಕೆ ಹೊಂದಿರುವ ರಾಜ್ಯದಲ್ಲಿ, ಜನಜೀವನವೂ ಅಷ್ಟೇ ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ದೇಶದಲ್ಲೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವ ನಂ.1 ರಾಜ್ಯ ಕರ್ನಾಟಕವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ಅನಂತ ಕುಮಾರ್ ಪ್ರತಿಷ್ಟಾನವು “ಕೋವಿಡ್ ಕಾಲದಲ್ಲಿ ನಾಯಕತ್ವ ಹಾಗೂ ದೇಶ ಮೊದಲು” ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ವೆಬಿನಾರ್ ನಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ರಾಜ್ಯವನ್ನು ತೀವ್ರವಾಗಿ ಪೀಡಿಸುತ್ತಿರುವ ಕೋವಿಡ್ ಸೋಂಕಿನ ನಡುವೆಯೂ ರಾಜ್ಯವು ಸಮಾಧಾನಕರವಾಗಿ ಚೇತರಿಸಿಕೊಳ್ಳುತ್ತಿದೆ. ಜನರಲ್ಲಿಯೂ ಸೋಂಕಿನ ಬಗ್ಗೆ ಸಾಕಷ್ಟು ಜಾಗೃತಿ ಬಂದಿದೆ ಎಂದರು.

ಉತ್ತಮ ಸಾಧನೆ:ದಿನೇದಿನೇ ಅನ್ಲಾಕ್ ಆಗುತ್ತಿದೆ. ಮುಂದಿನ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂದು ಕೆಲ ರಾಜ್ಯಗಳು ಗೊಂದಲದಲ್ಲಿ ಮುಳುಗಿವೆ. ಆದರೆ ನಮ್ಮ ರಾಜ್ಯವು ಪ್ರಧಾನಮಂತ್ರಿಯವರ ಆತ್ಮನಿರ್ಭರ ಪರಿಕಲ್ಪನೆಯಡಿ ಮುಂದೆ ಸಾಗುತ್ತಿದೆ. ಇದೇ ಸ್ಫೂರ್ತಿಯೊಂದಿಗೆ ಕೆಲವನ್ನೇ ಹೊರತುಪಡಿಸಿ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭ ಮಾಡಲಾಗಿದೆ. ತೆರಿಗೆ ಸಂಗ್ರಹದಲ್ಲೂ ಉತ್ತಮ ಸಾಧನೆಯಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.

ADVERTISEMENT

ಕೋವಿಡ್‌ನಿಂದ ತೀವ್ರ ಹೊಡೆತಕ್ಕೆ ಗುರಿಯಾಗಿರುವ ಕೈಗಾರಿಕೆ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ಸುಧಾರಣಾ ಕಾಯ್ದೆ ಸೇರಿದಂತೆ ಹಲವಾರು ಕಾನೂನಾತ್ಮಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆರಂಭದಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕು ಕಾಲಿಟ್ಟಾಗ ನಿಜಕ್ಕೂ ಆತಂಕವಿತ್ತು. ಅದಕ್ಕೆ ಅಗತ್ಯವಾದ ವೈದ್ಯಕೀಯ ಪರಿಕರಗಳಾಗಲಿ, ಸಿದ್ಧತೆಯಾಗಲಿ ಇರಲಿಲ್ಲ. ದಿಢೀರೆಂದು ಎದುರಾದ ಸಂಕಷ್ಟವನ್ನು ಜನರ ಸಹಕಾರ, ಕೊರೋನ ವಾರಿಯರ್ ಗಳ ಸ್ಥೈರ್ಯದಿಂದ ಯಶಸ್ವಿಯಾಗಿ ಎದುರಿಸಲಾಯಿತು. ಸರಕಾರವು ಬಲವಾದ ಇಚ್ಛಾಶಕ್ತಿಯಿಂದ ಎಲ್ಲ ಸವಾಲುಗಳನ್ನು ಕೂಡ ಹಿಮ್ಮೆಟ್ಟಿಸಿತು. ಯಾವುದೇ ಕ್ರಮವನ್ನು ಕೈಗೊಳ್ಳಲು ಹಿಂಜರಿಯಲಿಲ್ಲ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲವನ್ನೂ ನಿಭಾಯಿಸಲಾಯಿತು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನವದೆಹಲಿಯಿಂದಲೇ ವೆಬಿನಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ಅನಂತ್ ಕುಮಾರ್ ಅವರೊಂದಿಗೆ ತಮ್ಮ ಒಡನಾಟವನ್ನು ಮೆಲುಕು ಹಾಕಿದರಲ್ಲದೆ, ಕೋವಿಡ್ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಜತೆಗೆ ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮುಂತಾದವರು ವರ್ಚುವಲ್ ವೇದಿಕೆಯಿಂದಲೇ ಮಾತನಾಡಿದರು.

ಅನಂತ ಕುಮಾರ್ ಪ್ರತಿಷ್ಟಾನದ ತೇಜಸ್ವಿನಿ ಅನಂತ ಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.