ADVERTISEMENT

ಕರಾವಳಿ, ಮಲೆನಾಡಿನಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 18:54 IST
Last Updated 4 ಆಗಸ್ಟ್ 2021, 18:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶಿವಮೊಗ್ಗ, ಮಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಹಲವೆಡೆ ಉತ್ತಮ ಮಳೆಯಾಗಿದ್ದು, 57.61 ಮಿ.ಮೀ ಸರಾಸರಿ ಮಳೆಯಾಗಿದೆ.

ಹೊಸನಗರದಲ್ಲಿ 17.68 ಸೆಂ.ಮೀ ಮಳೆಯಾಗಿದ್ದು, ತೀರ್ಥಹಳ್ಳಿಯಲ್ಲಿ 86.60 ಮಿ.ಮೀ, ಸೊರಬದಲ್ಲಿ 43.30 ಮಿ.ಮೀ, ಸಾಗರದಲ್ಲಿ 42.80 ಮಿ.ಮೀ, ಶಿಕಾರಿಪುರದಲ್ಲಿ 27.40 ಮಿ.ಮೀ, ಶಿವಮೊಗ್ಗದಲ್ಲಿ 16.40 ಮಿ.ಮೀ,ಭದ್ರಾವತಿಯಲ್ಲಿ 9.60.ಮಿ.ಮೀ ಮಳೆಯಾಗಿದೆ.

ಭದ್ರಾ ಜಲಾಶಯಕ್ಕೆ 8 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಜಲಾಶಯ ಭರ್ತಿಗೆ ಇನ್ನು 3 ಅಡಿ ಬಾಕಿ ಇದೆ.

ADVERTISEMENT

ಲಿಂಗನಮಕ್ಕಿ ಜಲಾಶಯಕ್ಕೆ 32 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಜಲಾಶಯ ಮಟ್ಟ 1,808 ಅಡಿಗೆ ತಲುಪಿದ್ದು, ಭರ್ತಿಗೆ ಇನ್ನು 11 ಅಡಿ ಬಾಕಿ ಇದೆ. ತುಂಗಾ ಜಲಾಶಯಕ್ಕೆ 16 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.

ಕರಾವಳಿ, ಕಾಫಿನಾಡಿನಲ್ಲಿ ಉತ್ತಮ ಮಳೆ: ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿ ಗರಿಷ್ಠ 6.5 ಸೆಂ.ಮೀ. ಮಳೆಯಾಗಿದ್ದು, ಬಂಟ್ವಾಳ ತಾಲ್ಲೂಕಿನಲ್ಲಿ ಕನಿಷ್ಠ 2.5 ಸೆಂ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ 4 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 45 ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ.

ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಬಿರುಸಾಗಿ ಮಳೆ ಸುರಿದಿದೆ. ನದಿ, ಹಳ್ಳಗಳಲ್ಲಿ ಹರಿವು ಜಾಸ್ತಿಯಾಗಿದೆ. ಕಡೂರು, ಅಜ್ಜಂಪುರ, ತರೀಕೆರೆ, ಕಳಸ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಕಮ್ಮರಡಿಯಲ್ಲಿ 14.2, ಕರೆಕಟ್ಟೆಯಲ್ಲಿ 11.6, ಕಿಗ್ಗಾದಲ್ಲಿ 9.7 ಹಾಗೂ ಹರಿಪುರಪುರದಲ್ಲಿ 8.7 ಸೆಂ.ಮೀ ಮಳೆಯಾಗಿದೆ.

ಧಾರಾಕಾರ ಮಳೆ (ಮಡಿಕೇರಿ ವರದಿ): ಕೊಡಗು ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರ ಮಳೆಯಾಗಿದ್ದು, ಹಾರಂಗಿ ಜಲಾಶಯದ ಒಳಹರಿವು ಮತ್ತೆ ಏರಿಕೆಯಾಗಿದೆ.

7 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಆ.5ರಂದು ಈ ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

‘ಕರಾವಳಿ ಜಿಲ್ಲೆಗಳಲ್ಲಿ ಆ.8ರವರೆಗೆ ಯೆಲ್ಲೊ ಅಲರ್ಟ್‌ ಮುಂದುವರಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು. ಒಳನಾಡಿನ ಜಿಲ್ಲೆಗಳಲ್ಲಿ ಇದೇ 8 ರವರೆಗೆ ಮಳೆಯ ಪ್ರಮಾಣ ಕಡಿಮೆ ಇರಲಿದೆ’ ಇದೆ ಎಂದೂ ಮಾಹಿತಿ ನೀಡಿದೆ.

ಮಳೆ–ಎಲ್ಲಿ, ಎಷ್ಟು?: ಉಡುಪಿ ಜಿಲ್ಲೆಯ ಸಿದ್ದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಬುಧವಾರ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ತೀರ್ಥಹಳ್ಳಿ, ಭಟ್ಕಳ 9, ಸುಳ್ಯ, ಮೂಡುಬಿದರೆ, ಮಡಿಕೇರಿ 5, ಮಂಗಳೂರು, ಬೆಳ್ತಂಗಡಿ, ಕಾರವಾರ, ಸಾಗರ 4, ವಿರಾಜಪೇಟೆ, ಬಂಟ್ವಾಳ 3, ತರೀಕೆರೆ 2, ಧಾರವಾಡ, ಬೆಳಗಾವಿ, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಯಚೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಹಾಗೂ ಹಾಸನದಲ್ಲಿ 16 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.