ADVERTISEMENT

ಇಂದಿನಿಂದ ಅಂತರರಾಷ್ಟ್ರೀಯ ಕಾಫಿ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 0:18 IST
Last Updated 25 ಏಪ್ರಿಲ್ 2025, 0:18 IST
ಕಾಫಿ ಬೀಜ
ಕಾಫಿ ಬೀಜ   

ಬೆಂಗಳೂರು: ಭಾರತೀಯ ಕಾಫಿ ಮಂಡಳಿಯು ಮತ್ತು ಕಾಫಿ ಬೆಳೆಗಾರರ ಸಂಘಗಳು ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ‘ಭಾರತ–ಅಂತರರಾಷ್ಟ್ರೀಯ ಕಾಫಿ ಉತ್ಸವ–2025’ ಶುಕ್ರವಾರ ( ಏ.25) ಆರಂಭವಾಗಲಿದೆ.

‘ನಗರದ ಜಯಮಹಲ್‌ ರಸ್ತೆಯಲ್ಲಿರುವ ಚಾಮರ ವಜ್ರ ಸಭಾಂಗಣದಲ್ಲಿ ಉತ್ಸವ ಆಯೋಜಿಸಲಾಗಿದೆ. ಇದು ಭಾರತದ ಮೊದಲ ಕಾಫಿ ಉತ್ಸವವಾಗಿದ್ದು, ಪ್ರತಿ ವರ್ಷವೂ ನಡೆಸಲಾಗುವುದು’ ಎಂದು ಕಾಫಿ ಮಂಡಳಿಯ ಹಣಕಾಸು ನಿರ್ದೇಶಕ ಎನ್‌.ಎನ್‌.ನರೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಭಾರತದ ಎಲ್ಲ ಕಾಫಿ ಬೆಳೆಗಾರರು, ಕಾಫಿ ಕ್ಯೂರರ್‌ಗಳು, ಕಾಫಿ ಕೆಫೆ ಕಂಪನಿಗಳನ್ನು ಒಂದೆಡೆ ಸೇರಿಸಲು ಈ ಉತ್ಸವವನ್ನು ಆಯೋಜಿಸಲಾಗಿದೆ. ಕಾಫಿ ಬೆಳೆ, ಮಾರುಕಟ್ಟೆ, ರಫ್ತು ಉತ್ತೇಜನ ಮತ್ತು ಮೌಲ್ಯವರ್ಧನೆ ಕುರಿತಾದ ಸಂಶೋಧನೆಗಳು ಮತ್ತು ಚರ್ಚೆಗಳಿಗೆ ಉತ್ಸವವು ವೇದಿಕೆ ಒದಗಿಸಲಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಸ್ಪೆಷಲ್‌ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾ’ಗೆ (ಎಸ್‌ಸಿಎಐ) ಉತ್ಸವ ನಿರ್ವಹಣೆಯ ಹೊಣೆಗಾರಿಕೆ ನೀಡಲಾಗಿದೆ. ಎಸ್‌ಸಿಎಐ ಅಧ್ಯಕ್ಷ ಡಿ.ಎಂ.ಪೂರ್ಣೇಶ್‌, ‘ಉತ್ಸವದಲ್ಲಿ ಅಂದಾಜು 20,000 ಮಂದಿ ಭಾಗಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಒಂದು ದಿನದ ಪ್ರವೇಶಕ್ಕೆ ₹250 ಮತ್ತು ಮೂರೂ ದಿನಗಳ ಪ್ರವೇಶಕ್ಕೆ ₹500 ಶುಲ್ಕ ನಿಗದಿ ಮಾಡಲಾಗಿದೆ. ಉತ್ಸವದಲ್ಲಿ 15 ಕಾರ್ಯಾಗಾರಗಳನ್ನು ಆಯೋಜಿಸಿದ್ದು, ಎಲ್ಲರೂ ಅವುಗಳಲ್ಲಿ ಭಾಗಿಯಾಗಬಹುದು’ ಎಂದರು.

‘ಉತ್ಸವದ ಭಾಗವಾಗಿ ನಾಲ್ಕು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 80ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕಾಫಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.