ADVERTISEMENT

ಡಿ.ಕೆ. ಶಿವಕುಮಾರ್‌– ಸಿದ್ದರಾಮಯ್ಯ ನಡುವೆ ಶೀತಲ ಸಮರ

ಬೇರುಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಬದಲಾವಣೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 21:09 IST
Last Updated 22 ಜೂನ್ 2021, 21:09 IST
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್   

ನವದೆಹಲಿ: ‘ಮುಂದಿನ ಮುಖ್ಯಮಂತ್ರಿ ಯಾರು’ ಎಂಬ ಚರ್ಚೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣ ವಾಗಿದ್ದರೆ, ಪಕ್ಷದ ಪದಾಧಿಕಾರಿಗಳ ಬದಲಾವಣೆ ಪ್ರಸ್ತಾಪವು ಉಭಯ ನಾಯಕರ ನಡುವೆ ಶೀತಲ ಸಮರಕ್ಕೆ ನಾಂದಿ ಹಾಡಿದೆ.

ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಸಿದ್ದರಾಮಯ್ಯ ಅವರ ಶಿಫಾರಸ್ಸಿನ ಮೇರೆಗೆ ನೇಮಕಗೊಂಡಿದ್ದಾರೆ ಎಂಬ ಗುಮಾನಿಯಿಂದ ಪಕ್ಷದ ಅರ್ಧಕ್ಕೂ ಹೆಚ್ಚು ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳನ್ನು ತೆಗೆದು, ತಮ್ಮ ಆಪ್ತರಿಗೆ ಪಟ್ಟ ಕಟ್ಟಲು ಡಿ.ಕೆ. ಶಿವಕುಮಾರ್‌ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ಸೃಷ್ಟಿಸಿರುವ ಗೊಂದಲದ ಲಾಭವನ್ನು ಪಡೆಯಲು ಸನ್ನದ್ಧರಾಗಿರುವ ಕಾಂಗ್ರೆಸ್‌ ನಾಯಕರು, ಪಕ್ಷದ ಬೇರು ಮಟ್ಟದಲ್ಲಿ ತಮ್ಮ ಬೆಂಬಲಿಗರೇ ಇರುವಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯು ರಾಜ್ಯ ಮುಖಂಡರ ಶಿಫಾರಸ್ಸಿಗೆ ಬದಲಾಗಿ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಮುಖ್ಯಸ್ಥರ ಶಿಫಾರಸ್ಸನ್ನೇ ಆಧರಿಸಿ ನಡೆಯಬೇಕು’ ಎಂಬುದು ರಾಹುಲ್ ಗಾಂಧಿ ಆಶಯವಾಗಿದೆ. ಹಾಗಾಗಿಯೇ ಜಿಲ್ಲಾ ಘಟಕಗಳ ಮುಖ್ಯಸ್ಥರ ಸ್ಥಾನದಲ್ಲಿ ತಮ್ಮ ಬೆಂಬಲಿಗರೇ ಇರುವುದು ಸೂಕ್ತ ಎಂಬುದು ಈ ಇಬ್ಬರೂ ಮುಖಂಡರ ನಿಲುವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಬೇರು ಮಟ್ಟದಲ್ಲಿ ಬೆಂಬಲಿಗರ ಪಡೆ ಇದ್ದಲ್ಲಿ, ವಿಧಾನಸಭೆ ಚುನಾವಣೆಗೂ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ. ಗೆದ್ದ ನಂತರ ‘ಮುಖ್ಯಮಂತ್ರಿ’ ಪಟ್ಟ ಪಡೆಯುವುದೂ ಸುಲಭ ಎಂಬುದೇ ಈ ಲೆಕ್ಕಾಚಾರದ ಮೂಲ ಎಂಬುದು ಇಬ್ಬರೂ ಮುಖಂಡರ ನಡುವಿನ ಹಗ್ಗ–ಜಗ್ಗಾಟಕ್ಕೆ ಕಾರಣವಾಗಿದೆ.

ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಶಿವಕುಮಾರ್‌, ಪದಾಧಿಕಾರಿಗಳ ಬದಲಾವಣೆಯ ಸುಳಿವು ನೀಡಿದ್ದಾರೆ. ಅಲ್ಲದೆ, ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂಬ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂಬ ಅವರ ಬೇಡಿಕೆಗೆ ಸ್ಪಂದಿಸಿದ ಹೈಕಮಾಂಡ್‌, ಈ ಸಂಬಂಧ ಎಚ್ಚರಿಕೆಯನ್ನೂ ನೀಡಿದೆ.

ಈ ಬೆಳವಣಿಗೆಯಿಂದ ಎಚ್ಚೆತ್ತಿರುವ ಸಿದ್ದರಾಮಯ್ಯ ಅವರೂ ಮುಂದಿನ ವಾರದೆಹಲಿಗೆ ಬಂದು ಪದಾಧಿಕಾರಿಗಳ ದಿಢೀರ್‌ ಬದಲಾವಣೆಯ ಪ್ರಸ್ತಾವವನ್ನು ಕೈಬಿಡುವಂತೆ ಕೋರುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದ ನೇತೃತ್ವವು ಈಗ ಇರುವವರ ಬಳಿಯೇ ಇರಬೇಕು. ಒಂದೊಮ್ಮೆ ಬದಲಾವಣೆ ಅನಿವಾರ್ಯವಾದಲ್ಲಿ ನಮಗೂ ಆದ್ಯತೆ ನೀಡಬೇಕು’ ಎಂದು ಸಿದ್ದರಾಮಯ್ಯ ಬೆಂಬಲಿಗರು ಹಟ ಹಿಡಿದಿದ್ದಾರೆ. ಈ ಸಂಬಂಧ ಈಗಾಗಲೇ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ ಎಂದೂ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.