ಬಿ.ವೈ.ವಿಜಯೇಂದ್ರ
- ಫೇಸ್‌ಬುಕ್ ಚಿತ್ರ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶುಕ್ರವಾರ ಕರೆದಿದ್ದ ತಟಸ್ಥ ಮತ್ತು ಭಿನ್ನರ ಬಣದ ನಾಯಕರ ಸಭೆಯಲ್ಲಿ ‘ಸಾಮೂಹಿಕ ನಾಯಕತ್ವ’ದಲ್ಲಿ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಯಿತು.
‘ಪಕ್ಷದಲ್ಲಿ ಅನುಭವಿಗಳು, ಹಿರಿಯರು, ಶಕ್ತಿಶಾಲಿ ಯುವ ನಾಯಕರ ಪಡೆಯೇ ಇದೆ. ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆದಾಗ, ಬಿಜೆಪಿಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಇದೇ ನಮ್ಮ ಶಕ್ತಿ ಮತ್ತು ಪರಮ ಉದ್ದೇಶವೂ ಆಗಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು’ ಎಂದು ಮೂಲಗಳು ತಿಳಿಸಿವೆ.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಬಿ.ವೈ.ವಿಜಯೇಂದ್ರ, ಅರವಿಂದ ಲಿಂಬಾವಳಿ, ಸುನಿಲ್‌ಕುಮಾರ್, ಡಿ.ವಿ.ಸದಾನಂದಗೌಡ, ಗೋವಿಂದ ಕಾರಜೋಳ, ಸಿ.ಟಿ.ರವಿ, ಎನ್.ರವಿಕುಮಾರ್ ಮತ್ತು ಇತರರು ಭಾಗವಹಿಸಿದ್ದರು.
ಪಕ್ಷದ ವರಿಷ್ಠರು ಮತ್ತು ಸಂಘದ ಪ್ರಮುಖರ ಸೂಚನೆಯ ಮೇರೆಗೆ ನಾಯಕ ಮಧ್ಯೆ ಇರುವ ಭಿನ್ನಾಭಿಪ್ರಾಯವನ್ನು ನಿವಾರಿಸಿ, ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಇದು ಎರಡನೇ ಸಭೆ.
‘ಪಕ್ಷ ಈಗ ಎದುರಿಸುತ್ತಿರುವ ಸವಾಲುಗಳು ಮತ್ತು ಕಾಂಗ್ರೆಸ್ ಸರ್ಕಾರದ ದುರಾಡಳಿದಿಂದ ಜನತೆ ಸಂಕಷ್ಟಕ್ಕೆ ಸಿಲುಕಿರುವ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಣ್ಣ–ಪುಟ್ಟ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡು ಒಟ್ಟಿಗೆ ಮುನ್ನಡೆಯುವುದರಲ್ಲಿ ಎಲ್ಲರ ಹಿತ ಅಡಗಿದೆ ಎಂದು ಪ್ರಹ್ಲಾದ ಜೋಶಿ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಸದಾನಂದಗೌಡ ಅವರೂ ಸಹಮತ ಸೂಚಿಸಿದರು’ ಎಂದು ಮೂಲಗಳು ಹೇಳಿವೆ.
‘ರಾಜ್ಯದಲ್ಲಿ ಭ್ರಷ್ಟಾಚಾರ ತಾರಕಕ್ಕೆ ಏರಿದೆ. ಹಗರಣಗಳ ಮೇಲೆ ಹಗರಣಗಳು ನಡೆಯುತ್ತಿವೆ. ಆಡಳಿತದಲ್ಲಿ ಬಿಗಿಯೇ ಇಲ್ಲ. ಇಂತಹ ಉಸಿರುಗಟ್ಟಿಸುವ ಸ್ಥಿತಿಯಿಂದ ಜನರನ್ನು ಪಾರು ಮಾಡಲು ಜುಲೈನಿಂದ ನಿರಂತರ ಹೋರಾಟಗಳನ್ನು ರೂಪಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಡೆಯಿತು’ ಎಂದು ಮೂಲಗಳು ತಿಳಿಸಿವೆ.
9–10 ತಂಡಗಳಲ್ಲಿ ಪ್ರವಾಸ:
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ರೂಪುರೇಷೆಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.
9–10 ತಂಡಗಳನ್ನು ರಚಿಸಿ ಜಿಲ್ಲೆಗಳಿಗೆ ಪ್ರವಾಸ ಮಾಡಬೇಕು. ಆ ಜಿಲ್ಲೆಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ರೂಪಿಸಬೇಕು. ಪಕ್ಷದ ಜಿಲ್ಲಾ ಘಟಕಗಳಲ್ಲಿ ಇರಬಹುದಾದ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಚರ್ಚಿಸಿದ್ದೇವೆ ಎಂದರು.
‘ಎಲ್ಲ ನಾಯಕರೂ ಒಗ್ಗಟ್ಟಿನಿಂದ ಒಂದಾಗಿ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಹಿರಿಯ ನಾಯಕರು ಸಭೆಗೆ ಬಂದಿದ್ದರು. ಇನ್ನೂ ಕೆಲವು ಪ್ರಮುಖರು ಬರಬೇಕಿತ್ತು. ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗಿಲ್ಲ’ ಎಂದು ವಿಜಯೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.