ADVERTISEMENT

ಕಾಮೆಡ್‌–ಕೆ ಪರೀಕ್ಷೆ: 14 ಸಾವಿರ ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:31 IST
Last Updated 19 ಆಗಸ್ಟ್ 2020, 16:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕೆ ಬುಧವಾರ ನಡೆದ ಕಾಮೆಡ್‌–ಕೆ ಪರೀಕ್ಷೆಗೆ ರಾಜ್ಯದಲ್ಲಿ 14,280 ವಿದ್ಯಾರ್ಥಿಗಳು ಹಾಜರಾದರು. ರಾಜ್ಯದ 190 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 20 ಸಾವಿರ ಸೀಟುಗಳ ಪ್ರವೇಶ ಪ್ರಕ್ರಿಯೆ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಆಧಾರದ ಮೇಲೆ ನಡೆಯುತ್ತದೆ.

ರಾಜ್ಯದ 13 ನಗರಗಳ 73 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ನೋಂದಣಿ ಮಾಡಿಸಿದ್ದ 17,776 ವಿದ್ಯಾರ್ಥಿಗಳ ಪೈಕಿ ಶೇ 80ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆಯ ವೇಳೆ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು.

ಸೆ.4ಕ್ಕೆ ಫಲಿತಾಂಶ

ADVERTISEMENT

‘ಕಾಮೆಡ್‌–ಕೆ ವೆಬ್‌ಸೈಟ್‌ನಲ್ಲಿ ಆ.23ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು. ಆಕ್ಷೇಪಣೆಗಳ ಪರಿಗಣನೆ ನಂತರ, ಅಂತಿಮ ಸರಿ ಉತ್ತರಗಳನ್ನು ಆ.31ಕ್ಕೆ ನೀಡಲಾವುದು. ಸೆ.4ರಂದು ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್. ಕುಮಾರ್‌ ತಿಳಿಸಿದ್ದಾರೆ.

ದೇಶದಲ್ಲಿನ ಖಾಸಗಿ ವಿಶ್ವವಿದ್ಯಾಲಯಗಳ ಯುನಿಗೇಜ್‌ ಹಾಗೂ ಕಾಮೆಡ್‌–ಕೆ ಜಂಟಿಯಾಗಿ ಈ ಪರೀಕ್ಷೆ ನಡೆಸಿವೆ. ಆದರೆ, ಪ್ರತ್ಯೇಕ ಮೆರಿಟ್‌ ಪಟ್ಟಿ ಬಿಡುಗಡೆ ಮಾಡಲಿವೆ.

ತಾಂತ್ರಿಕ ಸಮಸ್ಯೆ

ನಗರದ 4 ಕೇಂದ್ರಗಳಲ್ಲಿ ತಾಂತ್ರಿಕ ಕಾರಣಗಳಿಂದ ಕೆಲವು ವಿದ್ಯಾರ್ಥಿಗಳು ಲಾಗಿನ್‌ ಆಗುವುದು ವಿಳಂಬವಾಯಿತು. ಕೊನೆಗೆ, ವಿದ್ಯಾರ್ಥಿಗಳಿಗೆ ಸರಿಯಾಗಿ ಮೂರು ತಾಸು ಸಮಯ ನೀಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.

ಶೇ 70ರಷ್ಟು ವಿದ್ಯಾರ್ಥಿಗಳು ಹಾಜರು

ದೇಶದ 259 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 43,331 ವಿದ್ಯಾರ್ಥಿಗಳು ಹಾಜರಾದರು. ಒಟ್ಟು 61,290 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.