ADVERTISEMENT

ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ವಾಣಿಜ್ಯೀಕರಣ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 9:38 IST
Last Updated 7 ಜುಲೈ 2020, 9:38 IST
ಸಚಿವ ಪ್ರಲ್ಹಾದ ಜೋಶಿ
ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಆಮದು ಪ್ರಮಾಣ ಕಡಿಮೆ ಮಾಡಿ ದೇಶದಲ್ಲಿಯೇ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕಲ್ಲಿದ್ದಲು ಗಣಿಗಾರಿಕೆಯನ್ನು ವಾಣಿಜ್ಯೀಕರಣ ಮಾಡಲಾಗುತ್ತಿದೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸದ್ಯಕ್ಕೆ 30 ದಿನಗಳಿಗಾಗುವಷ್ಟು ಬೇಕಾಗುವ ಕಲ್ಲಿದ್ದಲು ನಮ್ಮಲ್ಲಿ ಸಂಗ್ರಹವಿದೆ. 2023 ಅಥವಾ 2024ರ ವೇಳೆಗೆ ಭಾರತಕ್ಕೆ ಬೇಕಾಗುವ 1,000ರಿಂದ 1,100 ಮಿಲಿಯನ್‌ ಟನ್‌ ಕಲ್ಲಿದ್ದಲನ್ನು ನಮ್ಮಲ್ಲಿಯೇ ಉತ್ಪಾದಿಸುವಂತೆ ಕೋಲ್‌ ಇಂಡಿಯಾ ಕಂಪನಿಗೆ ಸೂಚಿಸಲಾಗಿದೆ. ಈ ಕಂಪನಿ ವರ್ಷದ ಇಲ್ಲಿಯ ತನಕ 606 ಮಿಲಿಯನ್‌ ಟನ್‌ ಉತ್ಪಾದನೆ ಮಾಡಿದೆ. ಹೋದ ವರ್ಷ 251 ಮಿಲಿಯನ್‌ ಟನ್‌ ಆಮದು ಮಾಡಿಕೊಳ್ಳಲಾಗಿತ್ತು’ ಎಂದು ತಿಳಿಸಿದರು.

‘ನಮ್ಮಲ್ಲಿ ಸಂಪನ್ಮೂಲವಿದ್ದರೂ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿರುವುದು ಮಹಾ ಪಾಪ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ವಾಣಿಜ್ಯೀಕರಣ ಮಾಡಿ ನಮ್ಮಲ್ಲಿಯೇ ಕಲ್ಲಿದ್ದಲು ಉತ್ಪಾದಿಸಲು ಒತ್ತು ಕೊಡಲಾಗುತ್ತದೆ. ಹಾಗಂದ ಮಾತ್ರಕ್ಕೆ ಕೋಲ್‌ ಇಂಡಿಯಾವನ್ನು ದುರ್ಬಲಗೊಳಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ವಾಣಿಜ್ಯೀಕರಣ ವಿರೋಧಿಸಿ ಕೋಲ್‌ ಇಂಡಿಯಾ ಕಂಪನಿ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ ‘ಕಂಪನಿಯ ಸಿಬ್ಬಂದಿ ಮನವೊಲಿಸುವ ಪ್ರಯತ್ನವನ್ನು ನಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ. ವಾಣಿಜ್ಯೀಕರಣದಿಂದ ಗಣಿಗಾರಿಕೆಗೆ ಧಕ್ಕೆಯಾಗುತ್ತದೆ ಎಂದು ಕೋಲ್‌ ಇಂಡಿಯಾ ಕಂಪನಿಯವರು ಹೇಳುತ್ತಿದ್ದಾರೆ. ಇದು ಸುಳ್ಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.