ADVERTISEMENT

ಮೀಸಲಾತಿಗೆ ಸಮಿತಿ ರಚನೆ ಕುತಂತ್ರವಷ್ಟೇ, ಪ್ರಾಮಾಣಿಕತೆ ಇಲ್ಲ– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 19:31 IST
Last Updated 4 ಮಾರ್ಚ್ 2021, 19:31 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ಮೀಸಲಾತಿ ಬೇಡಿಕೆಗಳ ಪರಿಶೀಲನೆಗೆ ಉನ್ನತಾಧಿಕಾರದ ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುತಂತ್ರ ಅಷ್ಟೆ. ಇದರಲ್ಲಿ ಲವಲೇಶದಷ್ಟು ಪ್ರಾಮಾಣಿಕತೆ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಮೀಸಲಾತಿ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸುವ ಪ್ರಾಮಾಣಿಕ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದರೆ, ಪೂರ್ಣಗೊಂಡು ಸಿದ್ಧ ಇರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಅನುಷ್ಠಾನಗೊಳಿಸಲಿ. ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗಗಳ ಬದಲಾವಣೆ ಬೇಡಿಕೆಯನ್ನು ಮೀಸಲಾತಿ ಹೆಚ್ಚಳದ ಮೂಲಕ ಮಾತ್ರ ಶಾಶ್ವತವಾಗಿ ಪರಿಹರಿಸಲು ಸಾಧ್ಯ. ರಾಜ್ಯ ಸರ್ಕಾರ‌ ತಕ್ಷಣ ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಒತ್ತಾಯಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಈಗ ಎದ್ದಿರುವ ಮೀಸಲಾತಿ ವಿವಾದ ಬಿಜೆಪಿ ಮತ್ತು ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ. ಎಚ್ಚರ ವಹಿಸದೆ ಹೋದರೆ ಇವರು ಹಚ್ಚಿರುವ ವಿವಾದದ ಬೆಂಕಿಗೆ ಇವರೇ ಸ್ವಯಂ ಬಲಿ ಆಗಲಿದ್ದಾರೆ’ ಎಂದೂ ಹೇಳಿದ್ದಾರೆ.

ADVERTISEMENT

ವಿವಿಧ ಸಮುದಾಯಗಳು ಪ್ರವರ್ಗಗಳಲ್ಲಿ ಬದಲಾವಣೆ ಮತ್ತು ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಇಟ್ಟಿರುವ ಬೇಡಿಕೆಗಳ ಕುರಿತು ಪರಿಶೀಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿ ಸದಸ್ಯ ಸಮಿತಿ ರಚಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.