ಬೆಂಗಳೂರು: ಕನ್ನಡ ಚಿತ್ರರಂಗದ ಕಲಾವಿದೆಯರೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಡೆಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ತನಿಖೆಗೆ ಸಮಿತಿ ರಚನೆಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಚಿತ್ರರಂಗದ ಕಲಾವಿದೆಯರ ಜೊತೆ ಮಹಿಳಾ ಆಯೋಗ ಸಭೆ ಆಯೋಜಿಸಿ, ಚರ್ಚೆ ನಡೆಸಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ಪಡೆದಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಯಾವ ಕಲಾವಿದೆಯರೂ ನನ್ನ ಬಳಿ ಇಂತಹ ಸಮಸ್ಯೆಗಳ ಕುರಿತು ಚರ್ಚಿಸಿಲ್ಲ’ ಎಂದರು.
‘ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಳಿಸುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತರಿಗೆ ಯೋಜನೆ ಜಾರಿಗೊಳಿಸಿದ ದಿನದಿಂದ ಇಲ್ಲಿಯವರೆಗಿನ ಅಷ್ಟೂ ಬಾಕಿ ಒಟ್ಟಿಗೆ ಜಮೆ ಮಾಡಲಾಗುವುದು’ ಎಂದು ಹೇಳಿದರು.
‘ಮಕ್ಕಳ ಪೋಷಕರು ಸಾವಯವ ಬೆಲ್ಲ ನಿರಾಕರಿಸಿದ್ದಾರೆ. ಹಾಗಾಗಿ, ಗಟ್ಟಿ ಬೆಲ್ಲವನ್ನೇ ಅ.1ರಿಂದ ಅಂಗನವಾಡಿ ಕೇಂದ್ರಗಳಿಗೆ ವಿತರಿಸಲಾಗುವುದು. ಜಿಲ್ಲಾ ಮಟ್ಟದಲ್ಲೇ ಆಹಾರ ಪದಾರ್ಥಗಳ ಪೌಡರ್ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದು, ₹200 ಕೋಟಿ ವೆಚ್ಚ ಮಾಡಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.