ADVERTISEMENT

‘ಪೀಠಾಧಿಕಾರಿಗಳಿಗೆ ಏಕರೂಪದ ಅಧಿಕಾರ: ಶೀಘ್ರದಲ್ಲಿ ಕರಡು ಸಲ್ಲಿಕೆ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 16:36 IST
Last Updated 13 ಜುಲೈ 2021, 16:36 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು: ಶಾಸನ ಸಭೆಗಳ ಪೀಠಾಧಿಕಾರಿಗಳ ಅಧಿಕಾರದಲ್ಲಿ ಏಕರೂಪತೆ ಮತ್ತು ಸ್ಪಷ್ಟತೆ ತರುವುದಕ್ಕೆ ಸಂಬಂಧಿಸಿದಂತೆ ಸಂವಿಧಾನದ 10ನೇ ಪರಿಚ್ಛೇದದ ತಿದ್ದುಪಡಿಯ ಶಿಫಾರಸುಗಳ ಕರಡನ್ನು ಶೀಘ್ರದಲ್ಲಿ ಸಲ್ಲಿಸಲಾಗುವುದು ಎಂದು ಕರಡು ರಚನಾ ಸಮಿತಿ ಸದಸ್ಯರಾಗಿರುವ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ವಿಧಾನಸಭೆಯ ಅಧ್ಯಕ್ಷರ ಸಮಾವೇಶದಲ್ಲಿ ರಾಜಸ್ತಾನ ವಿಧಾನಸಭೆಯ ಅಧ್ಯಕ್ಷ ಚಂದ್ರ ಪ್ರಕಾಶ್ ಜೋಶಿ ಅಧ್ಯಕ್ಷತೆಯ ಸಮಿತಿ ನೇಮಕ ಮಾಡಲಾಗಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ, ಒಡಿಶಾ ಮತ್ತು ನಾಗಾಲ್ಯಾಂಡ್‌ ವಿಧಾನಸಭೆಗಳ ಅಧ್ಯಕ್ಷರೂ ಸಮಿತಿಯ ಸದಸ್ಯರಾಗಿದ್ದಾರೆ. ಸೋಮವಾರ ವರ್ಚ್ಯುಯಲ್‌ ಆಗಿ ಸಮಿತಿಯ ಸಭೆ ನಡೆದಿದೆ.

‘ಶಾಸನಸಭೆಗಳ ಪೀಠಾಧಿಕಾರಿಗಳ ಅಧಿಕಾರದಲ್ಲಿ ಏಕರೂಪತೆ ಇಲ್ಲದ ಕಾರಣದಿಂದ ನಿರ್ಣಯಗಳೂ ವಿಭಿನ್ನವಾಗಿರುತ್ತವೆ. ಈ ಕಾರಣದಿಂದಾಗಿ ಗೊಂದಲ ಉಂಟಾಗುತ್ತಿದೆ. ಆದ್ದರಿಂದ ಅಧಿಕಾರದಲ್ಲಿ ಏಕರೂಪತೆ ಮತ್ತು ಸ್ಪಷ್ಟತೆ ತರುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತಿದೆ. ಈವರೆಗೆ ನಡೆದಿರುವ ಚರ್ಚೆಗಳ ಸ್ಫೂರ್ತಿಯ ಆಧಾರದಲ್ಲಿ ಕರಡನ್ನು ಅಂತಿಮಗೊಳಿಸುವಂತೆ ಪ್ರತಿಪಾದಿಸಿದ್ದೇನೆ’ ಎಂದು ಸ್ಪೀಕರ್ ತಿಳಿಸಿದ್ದಾರೆ.

ADVERTISEMENT

ಚರ್ಚೆ ಅಂತಿಮ ಹಂತದಲ್ಲಿದೆ. ಸಮಿತಿಯ ಮುಂದಿನ ಸಭೆಯ ವೇಳೆಗೆ ಸಂವಿಧಾನದ 10ನೇ ಪರಿಚ್ಛೇದದ ಅಡಿಯಲ್ಲಿ ಶಾಸನಸಭೆಗಳ ಪೀಠಾಧಿಕಾರಿಗಳ ಅಧಿಕಾರಕ್ಕೆ ಸಂಬಂಧಿಸಿದಂತೆ ತರಬೇಕಿರುವ ತಿದ್ದುಪಡಿಗಳ ಕರಡನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.