ADVERTISEMENT

ದೇಶದಲ್ಲೇ ಮೊದಲ‌ ಬಾರಿಗೆ ಕೋಮು ಹಿಂಸೆ‌ ನಿಗ್ರಹ ಪಡೆ: ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 7:03 IST
Last Updated 13 ಜೂನ್ 2025, 7:03 IST
<div class="paragraphs"><p>ವಿಶೇಷ ಕಾರ್ಯಪಡೆಯ ಲೋಗೊ ಬಿಡುಗಡೆ ಮಾಡಲಾಯಿತು</p></div>

ವಿಶೇಷ ಕಾರ್ಯಪಡೆಯ ಲೋಗೊ ಬಿಡುಗಡೆ ಮಾಡಲಾಯಿತು

   

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಒಳಗೊಂಡು, ಕೋಮು ಹಿಂಸೆ ನಿಗ್ರಹಕ್ಕಾಗಿ ರಚನೆಯಾಗಿರುವ ವಿಶೇಷ ಕಾರ್ಯಪಡೆಯನ್ನು (ಎಸ್ಎಎಫ್) ಅಗತ್ಯ ಬಂದಲ್ಲಿ ರಾಜ್ಯಕ್ಕೆ ವಿಸ್ತರಣೆ ಮಾಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಎಸ್ಎಎಫ್ ಕಚೇರಿ ಹಾಗೂ ಪೊಲೀಸ್ ವಸತಿಗೃಹಗಳ ಸಮುಚ್ಚಯ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ದೇಶದಲ್ಲೇ ಮೊದಲ‌ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇಂತಹ ಒಂದು ಕಾರ್ಯಪಡೆ ರಚನೆ ಮಾಡಿದೆ. ದ್ವೇಷ ಭಾಷಣ, ಕೋಮು ಸಂಘರ್ಷ ಸೃಷ್ಟಿಸುವವರನ್ನು ಹತ್ತಿಕ್ಕುವ ದಿಸೆಯಲ್ಲಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಶೈಕ್ಷಣಿಕ ವಾಗಿ, ಸಾಮಾಜಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾಗಿದೆ. ಈ‌ ನೆಲ ಮತ್ತೆ‌ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಬೇಕಾಗಿದೆ ಎಂದರು‌.

ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ ಈ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಗತ್ಯ ಬಂದಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗುವುದು. ಆದರೆ ಇಲ್ಲಿನ ಜನರು ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಈ ಕಾರ್ಯಪಡೆಗೆ ಹೆಚ್ಚು ಕೆಲಸ ಕೊಡದಂತೆ ನಡೆದುಕೊಳ್ಳಬೇಕು. ಬೇರೆ ಜಿಲ್ಲೆಗೆ ಇಂತಹ ಕಾರ್ಯಪಡೆಯ ಅಗತ್ಯ ಬರಲಾರದು ಎಂದು ಭಾವಿಸಿದ್ದೇವೆ. ಒಟ್ಟಿನಲ್ಲಿ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಹೇಳಿದರು.

ಹಿಂದೆ ಗೃಹ ಸಚಿವನಾಗಿದ್ದಾಗ ಬೆಂಗಳೂರಿನ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದ್ದೆ. ಚಿಕ್ಕ ಕೊಠಡಿಯಲ್ಲಿ ಅವರು ವಾಸಿಸುವ ಸ್ಥಿತಿ ಕಂಡು ರಾಜ್ಯದಾದ್ಯಂತ ಪೊಲೀಸರಿಗೆ ಸುಸಜ್ಜಿತ ವಸತಿಗೃಹ ನಿರ್ಮಾಣ ಮಾಡಬೇಕು ಯೋಚಿಸಿದ್ದೆ. ಅದಕ್ಕೆ ಅನುದಾನವೂ ಸರ್ಕಾರದಿಂದ‌ ದೊರೆಯಿತು‌. ಮಂಗಳೂರು ನಗರ ಹಾಗೂ ಬೆಳ್ತಂಗಡಿ ಪೊಲೀಸ್ ವಸತಿ ಗೃಹಗಳನ್ನು ‌ಉದ್ಘಾಟಿಸಲಾಗಿದೆ. ಪ್ರತಿ ವಸತಿಗೃಹವನ್ನು ಅಂದಾಜು ₹28 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಪರಮೇಶ್ವರ ಹೇಳಿದರು‌.

ಪ್ರಸ್ತುತ ಶೇ‌ 40 ಪೊಲೀಸ್ ಸಿಬ್ಬಂದಿ ವಸತಿಗೃಹಗಳಲ್ಲೇ ವಾಸಿಸುತ್ತಿದ್ದಾರೆ. ಈ ಪ್ರಮಾಣ ಶೇ 80 ಕ್ಕೆ ತಲುಪಬೇಕು ಎಂಬ ಗುರಿ ಇದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ಕೆಲಸ‌‌ ಮಾಡುತ್ತಿದ್ದು, ಶೇ 99 ರಷ್ಟು ಕೊಲೆ‌ ಪ್ರಕರಣಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ವಹಿಸಲಾಗಿದೆ‌. ಸೈಬರ್ ಅಪರಾಧ ಹೆಚ್ಚುತ್ತಿದ್ದು, ಪ್ರತಿ ಕಾನ್‌ಸ್ಟೇಬಲ್ ಸೈಬರ್ ಅಪರಾಧ ಪತ್ತೆ ಹಚ್ಚುವಲ್ಲಿ ತಜ್ಞತೆ ಪಡೆಯಬೇಕೆಂಬ ಉದ್ದೇಶದಿಂದ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ತರಬೇತಿ ವಿಭಾಗ ಪ್ರಾರಂಭಿಸಲಾಗಿದೆ ಎಂದು ಹೇಳಿದರು.‌

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಶೈಕ್ಷಣಿಕ, ವಾಣಿಜ್ಯಿಕ ವಾಗಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ದ್ವೇಷವೇ ಕಫ್ಪುಚುಕ್ಕೆಯಾಗಿದೆ. ಇದನ್ನು‌ ನಿಯಂತ್ರಿಸಲು ರಚನೆ‌ ಮಾಡಿರುವ ಎಸ್ ಎಎಫ್ ಅನ್ನು ಶೇ 90ರಷ್ಟು ಜನರು ಸ್ವಾಗತಿಸಿದ್ದಾರೆ. ಶೇ 5 ರಷ್ಟು ಜನರಿಗೆ ಇದರಿಂದ ತೊಂದರೆ ಆಗಬಹುದು. ಕಾನೂನು ಬಾಹಿರ ಚಟುವಟಿಕೆ‌ ನಿಯಂತ್ರಿಸಿ ಜನರು ಶಾಂತಿಯಿಂದ‌ ನೆಲೆಸಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಯಾವುದೇ ಕಾರಣಕ್ಕೂ ಇದನ್ನು ರಾಜಕೀಯವಾಗಿ ನೋಡುತ್ತಿಲ್ಲ. ಖಾಕಿಗೆ ಖಾಕಿಯೇ ಧರ್ಮವಾಗಿದ್ದು, ಯಾರೇ ತಪ್ಪು ಮಾಡಿದರೂ ಪಕ್ಷಪಾತ ಇಲ್ಲದೆ ಕ್ರಮ‌ವಹಿಸಬೇಕು. ಜಿಲ್ಲೆಯಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಎಲ್ಲ ಪಕ್ಷಗಳು, ಸಮುದಾಯಗಳು, ಶಿಕ್ಷಣ ತಜ್ಞರು, ಸಾಹಿತಿಗಳು ಎಲ್ಲರನ್ನೂ ಒಳಗೊಂಡು ಶಾಂತಿ ಸಭೆ ನಡೆಸಲಾಗುವುದು ಎಂದು ಹೇಳಿದರು.

ವಿಧಾನ‌ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಶಾಸಕ ಅಶೋಕ ಕುಮಾರ್ ರೈ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ. ಎ.ಸಲೀಂ, ಐಜಿಪಿ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಾರ್ಯಪಡೆ ಮುಖ್ಯಸ್ಥರಾಗಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.