ತುಮಕೂರು: ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲೇ ಮುಂದಿನ ವಾರದಿಂದ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ ಕಾರ್ಯಾರಂಭ ಮಾಡಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಗಲಭೆ ನಿಯಂತ್ರಣಕ್ಕೆ ಕಾರ್ಯಪಡೆ ರಚಿಸಲಾಗಿದೆ. ಈಗಾಗಲೇ ಕಾರ್ಯಪಡೆ ರಚಿಸಿ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿಐಜಿ, ಪೊಲೀಸ್ ವರಿಷ್ಠಾಧಿಕಾರಿ(ಎಸ್.ಪಿ), ಡಿವೈಎಸ್‌ಪಿ, ಸಬ್ ಇನ್‌ಸ್ಪೆಕ್ಟರ್ ಸೇರಿ ಸುಮಾರು 300 ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಅವರಿಗೆ ಪ್ರತ್ಯೇಕ ಅಧಿಕಾರ, ಸಮವಸ್ತ್ರ, ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ. ಕಾರ್ಕಳದ ತರಬೇತಿ ಕೇಂದ್ರದಲ್ಲಿ ಅಗತ್ಯ ತರಬೇತಿ ನೀಡಲಾಗುತ್ತದೆ ಎಂದರು.
ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಕ್ರಮ ಜರುಗಿಸುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡವರ ಮೇಲೆ ಕ್ರಮ ವಹಿಸಲಾಗುತ್ತದೆ. ರಾಜ್ಯದಲ್ಲಿ ಕೊಲೆ, ಅಪರಾಧ ಪ್ರಕರಣ ನಿಯಂತ್ರಣಕ್ಕೆ ಬರುತ್ತಿವೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.