ಬೆಂಗಳೂರು: ಕೆಲಸದ ಹೊರೆ ತಗ್ಗಿಸುವಂತೆ ವರ್ಷದಿಂದ ಮನವಿ ಮಾಡಿದ್ದರೂ ಕಂಪನಿ ಕಿವಿಗೇ ಹಾಕಿಕೊಂಡಿಲ್ಲ. ಕಿರುಕುಳ ಸಹಿಸಲಾಗದೆ ಊಟದ ವಿರಾಮದ ವೇಳೆ ಕಾರ್ಮಿಕರು ಕಾರ್ಖಾನೆ ಒಳಗೆ ಪ್ರತಿಭಟನೆ ನಡೆಸಿದ್ದನ್ನೇ ನೆಪವಾಗಿಟ್ಟುಕೊಂಡು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ನ.9 ರಿ೦ದ ಬೀಗಮುದ್ರೆ ಹಾಕುವ ನಿರ್ಧಾರ ಪ್ರಕಟಿಸಿದೆ ಎಂದು ಕಂಪನಿಯ ಕಾರ್ಮಿಕರ ಸಂಘ ದೂರಿದೆ.
‘ಸರ್ಕಾರವು ಕಂಪನಿಗೆ ಬೀಗಮುದ್ರೆ ಹಾಕುವ ಪರಿಪಾಠವನ್ನು (ಲಾಕ್‌ಔಟ್) ನಿಷೇಧಿಸಿದೆ. ಆದರೂ ಕಂಪನಿಯ ಆಡಳಿತ ವರ್ಗ ಕಾನೂನು ಬಾಹಿರವಾಗಿ ನಡೆದುಕೊಂಡಿದೆ. ಸಂಘದ ಪದಾಧಿಕಾರಿಗಳು ಸೇರಿದಂತೆ 40 ಕಾರ್ಮಿಕರನ್ನು ಅಮಾನತು ಮಾಡಿದೆ. ಕೆಲವರು ಕೆಲಸಕ್ಕೆ ಹೋಗಲು ಮುಂದಾಗಿದ್ದರು. ತಡವಾಗಿ ಬ೦ದರೆ೦ಬ ನೆಪವೊಡ್ಡಿ ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ. ಮುಚ್ಚಳಿಕೆಗೆ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಸಂಘವು ಆರೋಪಿಸಿದೆ.
ಇಷ್ಟಾಗಿಯೂ ಆಡಳಿತ ವರ್ಗದ ಜೊತೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಸಂಘ ಸಿದ್ಧವಿದೆ ಎಂದು ಸಂಘ ಹೇಳಿದೆ.
ಕಂಪನಿಯ ಆಡಳಿತವರ್ಗ ವೈಜ್ಞಾನಿಕ ಅಧ್ಯಯನ ನಡೆಸದೆ ಉತ್ಪಾದನಾ ಪ್ರಮಾಣವನ್ನು ಏಕಾಏಕಿ ಏಕಪಕ್ಷೀಯವಾಗಿ ಹೆಚ್ಚಿಸಿ, ಕೆಲಸದ ಹೊರೆಯನ್ನು ಹೆಚ್ಚಿಸಿತ್ತು. ಕಾರ್ಮಿಕರು ನೀರು ಕುಡಿಯಲು ಹೋಗದಂತೆ ಹಾಗೂ ಶೌಚಾಲಯಕ್ಕೆ ಹೋಗದಂತೆಯೂ ನಿರ್ಬಂಧಿಸಿತ್ತು. ಇದು ಯಾವ ಹಂತ ತಲುಪಿತ್ತು ಎಂದರೆ ಕಾರ್ಮಿಕರು ನೀರು ಕುಡಿಯಲು ಅಥವಾ ಶೌಚಾಲಯಕ್ಕೆ ಹೋದರೂ ಅವರು ಗೈರಾಗಿದ್ದಾರೆ ಎಂದು ಸಂಬಳ ಕಡಿತ, ಶಿಸ್ತು ಕ್ರಮದಂತಹ ಮನುಷ್ಯ ವಿರೋಧಿ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು ಎಂದು ಸಂಘವು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.