ADVERTISEMENT

ನಾನು ಅರಸು ಆಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2023, 0:30 IST
Last Updated 18 ಸೆಪ್ಟೆಂಬರ್ 2023, 0:30 IST
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾವಗಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ನೀಲಕಂಠಚಾರ್ಯ ಸ್ವಾಮೀಜಿ ಮಾತುಕತೆಯಲ್ಲಿ ತೊಡಗಿದ್ದರು
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾವಗಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ನೀಲಕಂಠಚಾರ್ಯ ಸ್ವಾಮೀಜಿ ಮಾತುಕತೆಯಲ್ಲಿ ತೊಡಗಿದ್ದರು   

ಬೆಂಗಳೂರು: ‘ಎರಡನೇ ದೇವರಾಜ ಅರಸು ಎಂದು ನನ್ನನ್ನು ಎಲ್ಲರೂ ಹೇಳುತ್ತಾರೆ. ಆದರೆ, ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ಬೇರೆ ಬೇರೆ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಅರಸು, ಇಂದಿರಾ ಗಾಂಧಿ, ಜವಾಹರಲಾಲ್‌ ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ, ಇವರ ಕೊಡುಗೆಗಳು ಅಪಾರ. ಯಾರ ಕೊಡುಗೆಯನ್ನೂ ಅಲ್ಲಗಳೆಯಲಾಗದು’ ಎಂದರು.

‘ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ  ಅರಸು ಆಗಲು ಸಾಧ್ಯವಿಲ್ಲ. ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ. ಎಲ್ಲ ಹಿಂದುಳಿದ ಜಾತಿ, ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆದುಕೊಂಡು ಮುಂದುವರೆದರೆ ಮಾತ್ರ ಇಡೀ ಸಮಾಜ ಮುಂದುವರೆಯುತ್ತದೆ. ಕೆಲವೇ ಜಾತಿ-ಸಮುದಾಯಗಳು ಅವಕಾಶಗಳನ್ನು ಪಡೆದುಕೊಂಡು ಉಳಿದವರು ಅವಕಾಶ ವಂಚಿತರಾಗುತ್ತಿದ್ದರೆ ಅದನ್ನು ಪ್ರಗತಿ ಪಥದಲ್ಲಿರುವ ಸಮಾಜ ಎನ್ನಲಾಗದು ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌ ಪಕ್ಷವು ಎಲ್ಲ ಜಾತಿ, ಸಮುದಾಯಗಳಿಗೂ ಅವಕಾಶ ಹಾಗೂ ಅಧಿಕಾರದ ಹಂಚಿಕೆ ಮಾಡುತ್ತ ಬಂದಿದೆ. ಹಿಂದುಳಿದ, ದಲಿತ ಸಮುದಾಯದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ಎರಡೂ ಸಮುದಾಯಗಳ ಗುತ್ತಿಗೆದಾರರಿಗೆ ₹ 1 ಕೋಟಿವರೆಗಿನ ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲಾತಿ ಒದಗಿಸಲಾಗಿದೆ. ತಮಗೆ ಅಧಿಕಾರ ಎನ್ನುವುದು ಸಾಮಾಜಿಕ ನ್ಯಾಯವನ್ನು ಹಂಚುವ ಸಾಧನ ಇದ್ದಂತೆ ಎಂದರು.

ಬಿಂಬಾ ರಾಯ್ಕರ್, ರಘು ಆಚಾರ್ಯ ಸೇರಿದಂತೆ ವಿಶ್ವಕರ್ಮ  ಸಮುದಾಯದ ಹಲವರಿಗೆ ಕಾಂಗ್ರೆಸ್‌ ಪಕ್ಷವು ಅವಕಾಶ ನೀಡಿತ್ತು. ರಘು ಆಚಾರ್ಯ ದುಡುಕಿ ಕಾಂಗ್ರೆಸ್‌ ತೊರೆದರು ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಯನ ಕೇಂದ್ರ ಸ್ಥಾಪನೆ: ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ನೇಕಾರರಿಗೆ ಒದಗಿಸಿದಂತೆ ವಿಶ್ವಕರ್ಮ ಸಮುದಾಯದವರಿಗೂ ನಿಗಮದ ಮೂಲಕ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. ಸಮುದಾಯದ ಮಕ್ಕಳಿಗಾಗಿ ಶಾಲೆ, ವಿದ್ಯಾರ್ಥಿ ನಿಲಯಗಳನ್ನು ಆರಂಭಿಸುವುದಕ್ಕೆ ಜಮೀನನ್ನೂ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ನೀಲಕಂಠಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.