ADVERTISEMENT

ಅನುಕಂಪದ ಉದ್ಯೋಗಕ್ಕೆ ವಿವಾಹಿತ ಪುತ್ರಿಯೂ ಅರ್ಹ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 16:48 IST
Last Updated 16 ಡಿಸೆಂಬರ್ 2020, 16:48 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮೃತ ಸರ್ಕಾರಿ ನೌಕರನ ವಿವಾಹಿತ ಪುತ್ರಿ ಸಹ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಲು ಅರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ವಿವಾಹಿತೆ ಎಂಬ ಕಾರಣಕ್ಕೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ನಿರಾಕರಿಸಿದ ಕೃಷಿ ಮಾರುಕಟ್ಟೆ ಇಲಾಖೆ ಕ್ರಮ ಪ್ರಶ್ನಿಸಿ ಭುವನೇಶ್ವರಿ ವಿ. ಪುರಾಣಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ‘ಇದು ಸಂವಿಧಾನಕ್ಕೆ ವಿರುದ್ಧವಾದ ನಡೆ ಮತ್ತು ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

‘ಮಗ ಅಥವಾ ಮಗಳೇ ಆಗಿರಲಿ ಅವರು ಮತ್ತು ಪೋಷಕರೊಂದಿಗಿನ ಸಂಬಂಧವನ್ನು ವಿವಾಹಗಳು ನಿರ್ಧರಿಸುವುದಿಲ್ಲ. ಬದಲಾಗುತ್ತಿರುವ ಸಮಯದಲ್ಲಿ ಕಾನೂನಿನ ವ್ಯಾಖ್ಯಾನವು ಬದಲಾವಣೆಗೆ ಒಳಪಟ್ಟಿದೆ. ವಿವಾಹಿತ ಪುತ್ರ ಅನುಕಂಪದ ಉದ್ಯೋಗ ಕೋರಲು ಅರ್ಹವಾಗಿರುವಾಗ, ವಿವಾಹಿತ ಪುತ್ರಿಯೂ ಅರ್ಹಳು. ಹೀಗಾಗಿ ಅರ್ಜಿದಾರರ ಹಕ್ಕನ್ನು ಮರುಪರಿಶೀಲನೆ ನಡೆಸಿ ಒಂದು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ADVERTISEMENT

‌ಅಶೋಕ್ ಅಡಿವೆಪ್ಪ ಮಡಿವಾಳ್ ಎಂಬುವರು ಬೆಳಗಾವಿ ಜಿಲ್ಲೆಯ ಕುಡುಚಿಯ ಎಪಿಎಂಸಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿದ್ದರು. ಅವರು ಮೃತಪಟ್ಟಿದ್ದರಿಂದ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಪುತ್ರಿ ಭುವನೇಶ್ವರಿ ವಿ.ಪುರಾಣಿಕ್ 2017ರ ಮೇ 22ರಂದು ಮನವಿ ಸಲ್ಲಿಸಿದ್ದರು. ವಿವಾಹ ಆಗಿರುವ ಕಾರಣ ಉದ್ಯೋಗ ನೀಡಲಾಗದು ಎಂದು ಕೃಷಿ ಮಾರುಕಟ್ಟೆ ಇಲಾಖೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಭುವನೇಶ್ವರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.