ADVERTISEMENT

ಮಗನ ಭೇಟಿಗೆ ಅವಕಾಶ ನಿರಾಕರಣೆ: ಬಿಜೆಪಿ ನಾಯಕರ ವಿರುದ್ಧ ಶಾಸಕನ ತಂದೆ ದೂರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:54 IST
Last Updated 13 ಮಾರ್ಚ್ 2020, 19:54 IST
ರಾಜ್ಯ ಕಾಂಗ್ರೆಸ್‌ ಸಮಿತಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಮುಖಂಡ ಕೃಷ್ಣ ಬೈರೇಗೌಡ ಮತ್ತು ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತೂ ಪಟವಾರಿ ಅವರ ಜತೆ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ (ಕಾನೂನು– ಸುವ್ಯವಸ್ಥೆ) ಅವರನ್ನು ಭೇಟಿಯಾದ ನಾರಾಯಣ ಚೌಧರಿ -ಫೇಸ್‌ಬುಕ್‌ ಚಿತ್ರ
ರಾಜ್ಯ ಕಾಂಗ್ರೆಸ್‌ ಸಮಿತಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಮುಖಂಡ ಕೃಷ್ಣ ಬೈರೇಗೌಡ ಮತ್ತು ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತೂ ಪಟವಾರಿ ಅವರ ಜತೆ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ (ಕಾನೂನು– ಸುವ್ಯವಸ್ಥೆ) ಅವರನ್ನು ಭೇಟಿಯಾದ ನಾರಾಯಣ ಚೌಧರಿ -ಫೇಸ್‌ಬುಕ್‌ ಚಿತ್ರ   

ಬೆಂಗಳೂರು/ ದೇವನಹಳ್ಳಿ: ತ‌ಮ್ಮ ಪುತ್ರ, ಶಾಸಕ ಮನೋಜ್‌ ಚೌಧರಿ ಅವರನ್ನು ಬಲವಂತವಾಗಿ ಬೆಂಗಳೂರಿಗೆ ಕರೆತಂದು ರೆಸಾರ್ಟ್‌ನಲ್ಲಿ ಇಡಲಾಗಿದ್ದು, ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಅವರ ತಂದೆ ನಾರಾಯಣ ಚೌಧರಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ, ಹೊರ ವಲಯದ ರೆಸಾರ್ಟ್‌ಗಳಲ್ಲಿ ಆಶ್ರಯ ಪಡೆದಿದ್ದ ಬಂಡಾಯ ಶಾಸಕರು ತಮ್ಮ ರಾಜ್ಯಕ್ಕೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಹೋಗಿ ವಾಪಸ್‌ ಬಂದಿದ್ದಾರೆ.

ಮೂರು ದಿನಗಳಿಂದ ದೇವನಹಳ್ಳಿಯ ಗಾಲ್ಫ್ ಶೇರ್‌ ರೆಸಾರ್ಟ್‌ ಮತ್ತು ಬಿಲ್ಲಮಾರನಹಳ್ಳಿಯ ಎಂ.ಸಿ. ಬೊಲೆವಾರ್ಡ್‌ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿದ್ದ ಮಧ್ಯಪ್ರದೇಶ ಬಂಡಾಯ ಕಾಂಗ್ರೆಸ್‌ ಶಾಸಕರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ತಮ್ಮ ರಾಜ್ಯದತ್ತ ಪ್ರಯಾಣಿಸಲು ಸಿದ್ಧತೆ ನಡೆಸಿದ್ದರು. ಶುಕ್ರವಾರ ವಿಧಾನಸಭೆ ಸ್ಪೀಕರ್‌ ಪ್ರಜಾಪತಿ ಮುಂದೆ ಅವರು ಹಾಜರಾಗಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಪ್ರಯಾಣ ರದ್ದುಪಡಿಸಿ ನಗರಕ್ಕೆ ವಾಪಸ್ಸಾದರು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ, ರಾಜ್ಯ ಕಾಂಗ್ರೆಸ್‌ ಸಮಿತಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಮುಖಂಡ ಕೃಷ್ಣ ಬೈರೇಗೌಡ ಮತ್ತು ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತೂ ಪಟವಾರಿ ಅವರ ಜತೆ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ (ಕಾನೂನು– ಸುವ್ಯವಸ್ಥೆ) ಅವರನ್ನು ಭೇಟಿಯಾದ ನಾರಾಯಣ ಚೌಧರಿ, ತಮ್ಮ ಮಗನನ್ನು ಕೆಲವರು ಬಲವಂತವಾಗಿ ಮಧ್ಯಪ್ರದೇಶದಿಂದ ಕರೆತಂದು ರೆಸಾರ್ಟ್‌ನಲ್ಲಿ ಇಟ್ಟಿದ್ದಾರೆ ಎಂದು ದೂರು ಸಲ್ಲಿಸಿದ್ದರು.

ADVERTISEMENT

ಪುತ್ರನನ್ನು ಭೇಟಿಯಾಗಲು ಬಿಜೆಪಿಯ ಕೆಲ ನಾಯಕರು ಅವಕಾಶ ನೀಡುತ್ತಿಲ್ಲ.ತಮ್ಮನ್ನು ಬಂಧಿಸಿ, ವಿನಾಕಾರಣ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು ಎಂದೂ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.