ADVERTISEMENT

2030ಕ್ಕೆ ಸಂಪೂರ್ಣ ಎಲೆಕ್ಟ್ರಿಕ್‌ ಬಸ್‌: ಶ್ರೀರಾಮುಲು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 19:41 IST
Last Updated 14 ಸೆಪ್ಟೆಂಬರ್ 2022, 19:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ 2030 ರ ವೇಳೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್‌ ಬಸ್‌ಗಳನ್ನು ಹೊಂದಲು ಸಂಕಲ್ಪ ಮಾಡಿದ್ದೇವೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ತನ್ವೀರ್‌ಸೇಠ್‌ ಪ್ರಶ್ನೆಗೆ ಉತ್ತರಿಸಿದ ಅವರು, ಡೀಸೆಲ್‌ ಬಸ್‌ಗಳ ಬದಲಿಗೆ 35 ಸಾವಿರ ಎಲೆಕ್ಟ್ರಿಕ್ ಬಸ್‌ಗಳು ರಾಜ್ಯದಲ್ಲಿ ಓಡಾಡಲಿವೆ ಎಂದು ಹೇಳಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ 2021 ರ ಡಿಸೆಂಬರ್‌ನಿಂದ ಕಾರ್ಯಾಚರಣೆ ಮಾಡುತ್ತಿವೆ. ಈ ಎಲೆಕ್ಟ್ರಿಕ್ ಬಸ್ಸಿನ ಪ್ರತಿ ಕಿ.ಮೀ ವೆಚ್ಚ ₹64.67 ಇದೆ. ಕೇಂದ್ರ ಸರ್ಕಾರದ ಫೇಮ್‌–2 ಯೋಜನೆಯಡಿ 300 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಸಿದ್ದು, ಆಗಸ್ಟ್‌ 15 ರಿಂದ ಕಾರ್ಯಾಚರಣೆ ನಡೆಸುತ್ತಿವೆ. ಈ ಬಸ್ಸಿನ ಪ್ರತಿ ಕಿ.ಮೀ ವೆಚ್ಚವು ₹61.90 ಎಂದರು.

ADVERTISEMENT

ಸಿಇಎಸ್‌ಎಲ್‌ ಮೂಲಕ ಕೇಂದ್ರ ಸರ್ಕಾರ ಫೇಮ್‌– 2 ಯೋಜನೆಯಡಿ 921 ಎಲೆಕ್ಟ್ರಿಕ್‌ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಆಗಸ್ಟ್‌ 17 ರಿಂದ ಆದೇಶ ನೀಡಲಾಗಿದೆ. ಇದರ ಪ್ರತಿ ಕಿ.ಮೀ ವೆಚ್ಚವು ₹54 ಇದೆ.
ಆದರೆ, ಡೀಸೆಲ್‌ ಬಸ್ಸಿನ ಪ್ರತಿ ಕಿ.ಮೀ ವೆಚ್ಚ ₹68.53 ಎಂದು ಅವರು ಹೇಳಿದರು.

‘ಈಗ ಗುತ್ತಿಗೆ ಮೇಲೆ ಪಡೆದಿರುವ ಬಸ್ಸುಗಳು 12 ವರ್ಷ ಕಾರ್ಯಾಚರಣೆ ನಡೆಸುತ್ತವೆ. ಇದಕ್ಕೆ ಚಾಲಕರನ್ನು ಬಸ್‌ ಕಂಪನಿಯವರೇ ನೀಡುತ್ತಾರೆ. ಕಂಡಕ್ಟರ್‌ ನಮ್ಮವರು ಇರುತ್ತಾರೆ’ ಎಂದು ಶ್ರೀರಾಮುಲು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.