ADVERTISEMENT

ಶಾಲಾ ಬ್ಯಾಗ್‌ಗಳಲ್ಲಿ ಕಾಂಡೋಮ್: ಎಚ್ಚರ ತ‍ಪ್ಪಿದರೆ ಇನ್ನಷ್ಟು ಹಾನಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 20:12 IST
Last Updated 30 ನವೆಂಬರ್ 2022, 20:12 IST
   

ಬೆಂಗಳೂರು: ಮಕ್ಕಳ ಶಾಲಾ ಬ್ಯಾಗ್‌ ಪರಿಶೀಲಿಸಿದಾಗ ಅವುಗಳಲ್ಲಿ ಕಾಂಡೋಮ್‌ಗಳು, ಗರ್ಭಪಾತ ಗುಳಿಗೆ, ನೀರಿನ ಬಾಟಲ್‌ಗಳಲ್ಲಿ ನೀರು ಮಿಶ್ರಿತ ಮದ್ಯ ಸಿಕ್ಕಿರುವ ವಿಷಯ ಕುರಿತುಕುಟುಂಬ, ಸಮಾಜ ಹಾಗೂ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು ಎಂದು ಸಾಹಿತಿಗಳು, ಶಿಕ್ಷಣ ತಜ್ಞರು, ಪ್ರಗತಿಪರ ಚಿಂತಕರು ಸಲಹೆ ನೀಡಿದ್ದಾರೆ.

ಮಕ್ಕಳ ಶಿಕ್ಷಣದ ಕ್ರಮ ಹಾಗೂ ವಿಧಾನಗಳ ಕುರಿತು, ಸಮಾಜ ಹಾಗೂ ಸರ್ಕಾರ ಗಂಭೀರವಾಗಿ ಆಲೋಚಿಸಲು ಇಂತಹ ವರದಿಗಳು ಪ್ರೇರಣೆಯಾಗಬಹುದು ಎನ್ನುವುದು ನಿಜ. ಈ ವಿಷಯದಲ್ಲಿ ಮಕ್ಕಳನ್ನೇ ದೂಷಿಸುವುದು ಅಪೇಕ್ಷಣೀಯವಲ್ಲ.
ಅದರಿಂದ ಮಕ್ಕಳಿಗೆ ಇನ್ನಷ್ಟು ಹಾನಿ ಆಗಬಹುದು ಎಂದು ವಿ.ಪಿ.ನಿರಂಜನಾರಾಧ್ಯ,ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಜಿ.ರಾಮಕೃಷ್ಣ, ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ಧರಾಮಯ್ಯ, ಕಾಳೇಗೌಡ ನಾಗವಾರ,ವಸುಂಧರಾ ಭೂಪತಿ, ವಿಜಯಾ,ಸುರೇಂದ್ರ ರಾವ್‌ ಎಚ್ಚರಿಸಿದ್ದಾರೆ.

ಇಂಥ ಬೆಳವಣಿಗೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿರುವ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲಕ್ಕಿಂತ ತುರ್ತು ಅಗತ್ಯ. ಕೋವಿಡ್ ಕಾಲದಲ್ಲಿ ಒಂದೆರಡು ವರ್ಷ ಶಾಲೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗಿವೆ. ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ಎರಡು ವರ್ಷಗಳ ಹಿಂದೆಯೇ ಎಚ್ಚರಿಕೆ ನೀಡಿದ್ದೆವು. ಮಕ್ಕಳಿಗೆ ನೇರ ಶಿಕ್ಷಣವಷ್ಟೇ ನೀಡಬೇಕು, ಮೊಬೈಲ್ ಸಾಧನಗಳ ಮೂಲಕ ಆನ್‌ಲೈನ್ ಪಾಠಗಳು ಹಲವು ತೊಂದರೆ ಸೃಷ್ಟಿಸಲಿವೆ ಎಂದೂ ಎಚ್ಚರಿಸಿದ್ದೆವು. ಈ ಕುರಿತು ಶಾಲಾ ಆಡಳಿತ ಮಂಡಳಿ ಹೊರೆಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು, ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರಯದಲ್ಲಿ ತಮ್ಮ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ ಹಾಗು ಆತಂಕಗಳಿಗೆ ಈಡಾಗದೆ ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ, ನಮ್ಮ ಸರ್ಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗೂ ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನೇ ವಿರೋಧಿಸಿದವು ಎಂದೂ ದೂರಿದ್ದಾರೆ.

ಮಕ್ಕಳು ಶಾಲೆಗೆ ಮೊಬೈಲ್‌ ತರುತ್ತಿದ್ದಾರೆ ಎನ್ನುವ ದೂರಿನ ಕುರಿತು ಕೆಲವು ಶಾಲೆಗಳಲ್ಲಿ ತಪಾಸಣೆ ನಡೆಸಿದಾಗ ಬ್ಯಾಗ್‌ಗಳಲ್ಲಿ ಕಾಂಡೋಮ್ಸ್‌ ಮತ್ತಿತರ ವಸ್ತುಗಳು ದೊರೆತ ಬಗ್ಗೆ ‘ಪ್ರಜಾವಾಣಿ’ ಡಿ.30ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.