ADVERTISEMENT

ಹರಿದಾಡಿದ ಅಶೋಕ ಗಸ್ತಿ ನಿಧನ ಸುದ್ದಿ: ಗೊಂದಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 13:02 IST
Last Updated 17 ಸೆಪ್ಟೆಂಬರ್ 2020, 13:02 IST
ಅಶೋಕ ಗಸ್ತಿ
ಅಶೋಕ ಗಸ್ತಿ    

ರಾಯಚೂರು: ಕೋವಿಡ್‌ ದೃಢವಾಗಿದ್ದರಿಂದ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಅವರು ನಿಧನರಾಗಿದ್ದಾರೆ ಎನ್ನುವ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ಖಾಸಗಿ ವಾಹಿನಿಗಳಲ್ಲಿ ಗುರುವಾರ ಹರಿದಾಡಿತು.

‘ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗಿದ್ದು, ಇದರಿಂದ ಬೇಸರವಾಗಿದೆ’ ಎಂದು ಕುಟುಂಬಸ್ಥರು ನೀಡಿದ ಸ್ಪಷ್ಟನೆಯನ್ನು ‘ಪ್ರಜಾವಾಣಿ’ ಅಂತರ್ಜಾಲ ತಾಣದಲ್ಲಿ ಮೊದಲು ಪ್ರಕಟಿಸಿತು. ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಕೂಡಾ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು. ‘ಮಣಿಪಾಲ್‌ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿದ್ದು, ಗಂಭೀರ ಸ್ಥಿತಿಯಲ್ಲಿರುವ ಅಶೋಕ ಗಸ್ತಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ’ ಎನ್ನುವ ಮಾಹಿತಿಯನ್ನು ಕೂಡಾ ಅಂತರ್ಜಾಲ ತಾಣದಲ್ಲಿ ಹಾಕಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುಳ್ಳುಸುದ್ದಿ ಗಮನಿಸಿ, ಕೇಂದ್ರ ಗೃಹ ಸಚಿವ ಅಮಿತ್‌ ಷಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ತಮ್ಮ ಟ್ವಿಟರ್ ಖಾತೆಗಳಲ್ಲಿ ಸಂತಾಪ ಸೂಚಿಸಿದ್ದರು. ಗುರುವಾರ ಸಂಜೆ ಮಣಿಪಾಲ್‌ ಆಸ್ಪತ್ರೆಯಿಂದ ಹೊರಬಿದ್ದ ಪ್ರಕಟಣೆಯ ಬಳಿಕ ತಮ್ಮ ಸಂದೇಶಗಳನ್ನು ಬದಲಿಸಿಕೊಂಡು ‘ಗಸ್ತಿ ಅವರಿಗೆ ಮರುಜನ್ಮ ದೊರಕಲಿ, ಬೇಗನೆ ಗುಣಮುಖರಾಗಿ ಹೊರಬರಲಿ’ ಎಂದು ಶುಭ ಹಾರೈಸುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.