ADVERTISEMENT

ಆತ್ಮಾವಲೋಕನ ಅಗತ್ಯ: ಬಿ.ಕೆ.ಚಂದ್ರಶೇಖರ್

‘ಪ್ರದೇಶ ಕಾಂಗ್ರೆಸ್‌ ಸಮಿತಿ ವಿಸರ್ಜನೆ ಅಗತ್ಯವಿತ್ತೇ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:13 IST
Last Updated 8 ಜುಲೈ 2019, 20:13 IST
ಚಂದ್ರಶೇಖರ
ಚಂದ್ರಶೇಖರ   

ಬೆಂಗಳೂರು: ‘ಸಮ್ಮಿಶ್ರ ಸರ್ಕಾರದ ಮೊದಲ ದಿನದಿಂದಲೇ ಆರಂಭವಾದ ಅಸಮಾಧಾನ, ಕೋಪ–ತಾಪಗಳ ಅಭಿವ್ಯಕ್ತಿಯನ್ನು ತಡೆಯುವುದು ಅಸಾಧ್ಯವಾಗಿತ್ತೇ. ಈಗಲೂ ನಾವು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳದಿದ್ದಲ್ಲಿ ಜನರ ನಂಬಿಕೆ ಹಾಗೂ ಬಯಕೆಗಳಿಗೆ ಸ್ಪಂದಿಸಲು ಸಾಧ್ಯವೇ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

‘ಲೋಕಸಭೆ ಚುನಾವಣೆಯಲ್ಲಿ ಭಾರಿ ಸೋಲಿನ ಬಳಿಕವಾದರೂ ತಾಳ್ಮೆ, ವಿವೇಚನೆ ಪ್ರದರ್ಶಿಸಬೇಕಿತ್ತು. ಅಭ್ಯರ್ಥಿ ಆಯ್ಕೆ ಹಾಗೂ ಪ್ರಚಾರದ ವಿಷಯದಲ್ಲಿ ಭಾಗಿಯಾಗದ ಸುಮಾರು 300 ಪದಾಧಿಕಾರಿಗಳಿದ್ದ ಪ್ರದೇಶ ಕಾಂಗ್ರೆಸ್‌ ಸಮಿತಿಯನ್ನು ವಿಸರ್ಜನೆ
ಮಾಡುವ ಹಾಗೂ ನಮ್ಮ ಸೋಲಿಗೆ ಜೆಡಿಎಸ್‌ ಕಾರಣ ಎಂದು ಬಹಿರಂಗ ಹೇಳಿಕೆ ನೀಡುವ ಅನಿವಾರ್ಯ ಇತ್ತೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ರಾಹುಲ್‌ ಗಾಂಧಿ ತಮ್ಮ ರಾಜೀನಾಮೆ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಪ್ರಮುಖವಾಗಿ ನಾಯಕರುಗಳು ಸೋಲಿನ ಹೊಣೆ ಹೊತ್ತ ನಂತರ ಇತರರ ಉತ್ತರದಾಯಿತ್ವಕ್ಕೆ ಒತ್ತಾಯಿಸುವುದೇ ಶಿಷ್ಟಾಚಾರ’ ಎಂದು ಹೇಳಿದ್ದಾರೆ.

ADVERTISEMENT

‘ಸೋಲಿನ ವಿಚಾರವನ್ನು ಹಾದಿ ಬೀದಿಯಲ್ಲಿ ಮಾತನಾಡುವ ಬದಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಲು ಕಾರ್ಯಕಾರಿ ಸಮಿತಿ ಸಭೆ ಕರೆಯಲು ಅಧ್ಯಕ್ಷರಿಗೆ ಪತ್ರ ಬರೆದಿದ್ದೆ. ಅವರಿಂದ ಈಗಲೂ ಪ್ರತಿಕ್ರಿಯೆ ಬಂದಿಲ್ಲ’ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

‘ಸಂಕೀರ್ಣ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶ ಸ್ವಾಗತಾರ್ಹ. ಕಾರ್ಯಕರ್ತರ ರಾಜಕೀಯ ಆಕಾಂಕ್ಷೆಗಳು, ಅವರ ಆತಂಕ–ನೋವುಗಳನ್ನು ಅರಿತಿರುವ ಖರ್ಗೆಯವರು ಸಮ್ಮಿಶ್ರ ಸರ್ಕಾರವನ್ನು ಮುಂದುವರಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.