ADVERTISEMENT

ದೇಶದ ಆರ್ಥಿಕ ಸಂಕಷ್ಟಕ್ಕೆ ಕಾಂಗ್ರೆಸ್‌, ಬಿಜೆಪಿ ಕಾರಣ: ಡಾ.ಬರಗೂರು ರಾಮಚಂದ್ರಪ್ಪ

ಎಐಡಿವೈಒ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 12:45 IST
Last Updated 27 ನವೆಂಬರ್ 2021, 12:45 IST
ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಕೆಂಪು ಧ್ವಜವನ್ನು ಹಾರಿಸುವ ಮೂಲಕ ಎಐಡಿವೈಒ 5ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಂಘಟನೆಯ ರಾಜ್ಯ ಅಧ್ಯಕ್ಷೆ ಎಂ. ಉಮಾದೇವಿ, ಗುಲಬರ್ಗಾ ವಿ.ವಿ. ಪ್ರಾಧ್ಯಾಪಕ ಪ್ರೊ. ರಮೇಶ ಲಂಡನಕರ್, ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ರಾಷ್ಟ್ರೀಯ ಕಾರ್ಯದರ್ಶಿ ಪ್ರತಿಭಾ ನಾಯಕ್, ರಾಜ್ಯ ಕಾರ್ಯದರ್ಶಿ ಜಿ. ಶಶಿಕುಮಾರ್ ಇದ್ದರು
ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಕೆಂಪು ಧ್ವಜವನ್ನು ಹಾರಿಸುವ ಮೂಲಕ ಎಐಡಿವೈಒ 5ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಂಘಟನೆಯ ರಾಜ್ಯ ಅಧ್ಯಕ್ಷೆ ಎಂ. ಉಮಾದೇವಿ, ಗುಲಬರ್ಗಾ ವಿ.ವಿ. ಪ್ರಾಧ್ಯಾಪಕ ಪ್ರೊ. ರಮೇಶ ಲಂಡನಕರ್, ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ರಾಷ್ಟ್ರೀಯ ಕಾರ್ಯದರ್ಶಿ ಪ್ರತಿಭಾ ನಾಯಕ್, ರಾಜ್ಯ ಕಾರ್ಯದರ್ಶಿ ಜಿ. ಶಶಿಕುಮಾರ್ ಇದ್ದರು   

ಕಲಬುರಗಿ: ‘ದೇಶದ ಇಂದಿನ ಆರ್ಥಿಕ ಸಂಕಷ್ಟಕ್ಕೆ ಬಿಜೆಪಿಯಷ್ಟೇ ಕಾಂಗ್ರೆಸ್‌ ಸಹ ಸಮಾನ ಕಾರಣವಾಗಿದೆ. 1991ರಲ್ಲಿ ಜಾಗತೀಕರಣ, ಖಾಸಗೀಗರಣ ನೀತಿಯ ಬೀಜವನ್ನು ಬಿತ್ತಿತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ವೃಕ್ಷವಾಗಿ ಬೆಳೆಸಿತು. ಹೀಗಾಗಿಯೇ, ಲಾಭದಲ್ಲಿದ್ದ ಸಾರ್ವಜನಿಕ ಸಂಸ್ಥೆಗಳನ್ನು ನಿಷ್ಪ್ರಯೋಜಕ ಎಂಬಂತೆ ಬಿಂಬಿಸುವ ಅಪ‍ಪ್ರಚಾರಗಳು ನಡೆದವು’ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಟೀಕಿಸಿದರು.

ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ)ಯ 5ನೇ ರಾಜ್ಯ ಸಮ್ಮೇಳನಕ್ಕೆ ನಗರದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಜೆಗಳ ಮೂಲಭೂತ ಹಕ್ಕಾಗಿರುವ ಶಿಕ್ಷಣ ಮತ್ತು ಆರೋಗ್ಯವನ್ನು ಉದ್ಯಮವನ್ನಾಗಿಸಲಾಗಿದೆ. ಹೊಸದಾಗಿ ಜಾರಿಗೆ ತರಲಾದ ಹೊಸ ಶಿಕ್ಷಣ ನೀತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ವಿದ್ಯಾರ್ಥಿಗಳನ್ನು ಗ್ರಾಹಕರು ಎಂದು ಕರೆಯಲಾಗುತ್ತಿದೆ. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ಶಿಕ್ಷಣ ಕ್ಷೇತ್ರದ ಕೆಲಸಗಾರರು ಎಂದು ಕರೆಯಲಾಗುತ್ತಿದೆ’ ಎಂದು ವಿಷಾದಿಸಿದರು.

ADVERTISEMENT

‘ಮಹಾತ್ಮ ಗಾಂಧೀಜಿ ಚಿತ್ರಕ್ಕೆ ಗುಂಡು ಹಾರಿಸುವ, ಸಂವಿಧಾನದ ಪ್ರತಿಗೆ ಬೆಂಕಿ ಹಚ್ಚಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿರುದ್ಧ ಘೋಷಣೆ ಕೂಗುವ ಅತಿರೇಕಗಳನ್ನು ಇಂದು ಕಾಣುತ್ತಿದ್ದೇವೆ. ಗೋಡ್ಸೆ ಪರಂಪರೆ ದೇಶಕ್ಕೆ ಹೆಚ್ಚು ಅಪಾಯಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ವ್ಯಕ್ತಿ ಪಕ್ಷದ ಕಚೇರಿಗೆ ತೆರಳಿ ಮತ ಕೇಳಿದ್ದು ಸರಿಯಲ್ಲ. ಯಾವುದೇ ಸಿದ್ಧಾಂತ ಹೊಂದಿದವರಾಗಿದ್ದರೂ ಆ ಸಿದ್ಧಾಂತ ಪ್ರತಿನಿಧಿಸುವ ಪಕ್ಷದೊಂದಿಗೆ ಮಾನಸಿಕ ಅಂತರ ಕಾಯ್ದುಕೊಳ್ಳಬೇಕಿತ್ತು’ ಎಂದರು.

‘‍ಆ ಪಕ್ಷದವರೂ ಇವರ ಗೆಲುವಿಗಾಗಿ ಶ್ರಮಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಪಕ್ಷದ ಕಚೇರಿಗೆ ತೆರಳಿ ಮತ ಕೇಳಿದ್ದು ವಿವಾದವಾಗುತ್ತಿದ್ದಂತೆಯೇ ಎಲ್ಲ ಪಕ್ಷದ ಕಚೇರಿಗಳಿಗೂ ತೆರಳಿದ್ದೆ ಎಂದು ಆ ಅಭ್ಯರ್ಥಿ ಸಮಜಾಯಿಷಿ ನೀಡಿದರು. ಆದರೆ, ಇದು ವಿಶ್ವಾಸಾರ್ಹತೆಯ ವಿಷಯವಾಗಿತ್ತು’ ಎಂದು ಈಚೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಮಹೇಶ ಜೋಶಿ ಅವರ ಹೆಸರನ್ನು ಉಲ್ಲೇಖಿಸದೇ ಹೇಳಿದರು.

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್‌ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ಪ್ರಧಾನ ಕಾರ್ಯದರ್ಶಿ ಪ್ರತಿಭಾ ನಾಯಕ್, ರಾಜ್ಯ ಘಟಕದ ಅಧ್ಯಕ್ಷೆ ಎಂ. ಉಮಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.