ADVERTISEMENT

ರಸಗೊಬ್ಬರ ಪೂರೈಕೆ: ಕಾಂಗ್ರೆಸ್‌ ಸಂಸದರಿಂದ ನಡ್ಡಾಗೆ ಮನವಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 15:18 IST
Last Updated 31 ಜುಲೈ 2025, 15:18 IST
ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ   

ನವದೆಹಲಿ: ಕೇಂದ್ರ ಸರ್ಕಾರವು ಸಕಾಲದಲ್ಲಿ ರಸಗೊಬ್ಬರ ಪೂರೈಸದ ಕಾರಣ ರಾಜ್ಯದಲ್ಲಿ ಭಾರಿ ಸಮಸ್ಯೆಯಾಗಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಸಂಸದರು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಸಲ್ಲಿಸಿದರು. 

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಜಿ.ಕುಮಾರ ನಾಯಕ, ಇ. ತುಕಾರಾಮ್‌ ಹಾಗೂ ಸಾಗರ್ ಖಂಡ್ರೆ ಅವರನ್ನು ಸಚಿವರನ್ನು ಭೇಟಿ ಮಾಡಿ, ‘ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ, ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದೆ. ಆದರೆ, ಈ ವರ್ಷ ಯೂರಿಯಾ ಪೂರೈಕೆ ಪ್ರಮಾಣ ಶೇ 50ರಷ್ಟು ಕಡಿಮೆ ಆಗಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಗಮನ ಸೆಳೆದರು. ಕೇಂದ್ರ ಸರ್ಕಾರವು 1.35 ಲಕ್ಷ ಟನ್‌ಗಳಷ್ಟು ರಸಗೊಬ್ಬರ ಪೂರೈಕೆ ಮಾಡಿದರೆ ಈ ಸಮಸ್ಯೆ ಅಲ್ಪ ಮಟ್ಟಿಗೆ ಪರಿಹಾರ ಆಗಬಲ್ಲದು ಎಂದರು. 

ನಡ್ಡಾ ಪ್ರತಿಕ್ರಿಯಿಸಿ, ‘ಈ ಸಲ ಚೀನಾದಿಂದ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ. ಬೇರೆ ದೇಶಗಳಿಂದ ತರಿಸಿಕೊಂಡು ಪೂರೈಕೆ ಮಾಡಲಾಗುವುದು. ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಅಗತ್ಯ ಇರುವಷ್ಟು ರಸಗೊಬ್ಬರ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.