ADVERTISEMENT

ಸ್ಪೀಕರ್‌ ಕಚೇರಿಗೆ ಕಾಂಗ್ರೆಸ್‌, ಬಿಜೆಪಿ ನಾಯಕರ ದಂಡು

ರಮೇಶ್‌ ಕುಮಾರ್‌ ನಡೆಯತ್ತ ಎಲ್ಲರ ಚಿತ್ತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 20:00 IST
Last Updated 17 ಜುಲೈ 2019, 20:00 IST
   

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಕೈಗೊಳ್ಳುವ ನಿರ್ಧಾರಗಳ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.

ಬುಧವಾರ ಸಂಜೆ ಅವರ ಕಚೇರಿಗೆ ಬಂದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಇತರ ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಅತೃಪ್ತ ಶಾಸಕರು ಅನುಮತಿ ಪಡೆಯದೆ ಗೈರಾದರೆ ಅದು ಸಹ ಅಶಿಸ್ತಿನ ಭಾಗ ಎಂದು ಪರಿಗಣಿಸುವ ಸಾಧ್ಯತೆ ಇರುವುದನ್ನು ಸಭೆಯ ಬಳಿಕ ಸಚಿವ ಕೃಷ್ಣ ಬೈರೇಗೌಡ ಪತ್ರಕರ್ತರಿಗೆ ತಿಳಿಸಿದರು.

‘ವಿಪ್‌ ಜಾರಿಗೊಳಿಸುವುದು ಶಾಸಕಾಂಗ ಪಕ್ಷದ ಹಕ್ಕು. ಅದನ್ನು ಬಳಸುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು ಎಂದು ಸಭಾಧ್ಯಕ್ಷರು ಹೇಳಿದರು. ಸುಪ್ರೀಂ ಕೋರ್ಟ್‌ ತೀರ್ಪು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಹಕ್ಕುಗಳನ್ನು ಮೊಟಕುಗೊಳಿಸಿದೆ. ಇದರ ಬಗ್ಗೆಯೂ ಸ್ಪಷ್ಟನೆ ಕೇಳಲು ಬಂದಿದ್ದೆವು. ನಿಮಗೆ ಆ ರೀತಿ ಆಗಿದ್ದರೆ ಅರ್ಜಿ ಕೊಡಿ, ಕಾನೂನು ತಜ್ಞರ ಸಲಹೆ ಪಡೆಯಿರಿ ಎಂದು ಹೇಳಿದರು’ ಎಂದು ಅವರು ವಿವರಿಸಿದರು.

ADVERTISEMENT

ಬಿಜೆಪಿ ಶಾಸಕರಾದ ಮಾಧುಸ್ವಾಮಿ, ಕೆ.ಜಿ.ಬೋಪಯ್ಯ, ಬಸವರಾಜ ಬೊಮ್ಮಾಯಿ ಸಭಾಧ್ಯಕ್ಷರನ್ನು ಭೇಟಿ ಮಾಡಿ, ಗುರುವಾರದ ಕಲಾಪದಲ್ಲಿ ಕಾಲಹರಣ ಮಾಡುವುದಕ್ಕೆ ಅವಕಾಶ ನೀಡಬಾರದು, ಬಿಜೆಪಿ ಸದಸ್ಯರು ಹೆಚ್ಚು ಮಾತನಾಡುವುದಿಲ್ಲ ಎಂದರು.

ಈ ಮಧ್ಯೆ,ಪಕ್ಷೇತರ ಶಾಸಕ ಆರ್‌.ಶಂಕರ್ ಅವರ ಕೆ‍‍ಪಿಜೆಪಿ ಪಕ್ಷ ಕಾಂಗ್ರೆಸ್‌ನಲ್ಲಿ ಳಿಸಲು ನಿರ್ಧರಿಸಿದ್ದಲ್ಲಿ ಅದಕ್ಕೆ ಸೂಕ್ತ ದಾಖಲೆ ನೀಡಬೇಕು ಎಂದು ಸೂಚಿಸಿ ಸಭಾಧ್ಯಕ್ಷರು ಬುಧವಾರ ಪತ್ರ ಬರೆದಿದ್ದಾರೆ. ಶಂಕರ್‌ ಈಗಲೂ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಇವರು ಅನರ್ಹತೆಗೆ ಅರ್ಹರು ಎಂಬುದನ್ನು ಸ್ಪೀಕರ್‌ ಗಮನಕ್ಕೆ ತಂದಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಮೂವರು ಗೈರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂ.ಟಿ.ಬಿ.ನಾಗರಾಜ್‌, ಕೆ.ಸುಧಾಕರ್‌, ರೋಷನ್‌ ಬೇಗ್‌ ಅವರು ಬುಧವಾರ ಸಭಾಧ್ಯಕ್ಷರ ಮುಂದೆ ವಿಚಾರಣೆಗೆ ಹಾಜರಾಗಲಿಲ್ಲ. ಇವರು ಮೊದಲೇ ಪತ್ರ ಬರೆದು, ವಿಚಾರಣೆಗೆ ಬೇರೊಂದು ದಿನ ನಿಗದಿಪಡಿಸಲು ಕೋರಿಕೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.