ADVERTISEMENT

ಸಂಪುಟದಿಂದ ಹೊರಗಿರುವವರಿಗೆ ಅವಕಾಶ ನೀಡಬೇಕೆಂದು ಮೊದಲೇ ನಿರ್ಧರಿಸಲಾಗಿದೆ: ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 15:16 IST
Last Updated 25 ಅಕ್ಟೋಬರ್ 2025, 15:16 IST
<div class="paragraphs"><p>ಕೃಷ್ಣ ಬೈರೇಗೌಡ</p></div>

ಕೃಷ್ಣ ಬೈರೇಗೌಡ

   

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ, ಉತ್ತರಾಧಿಕಾರಿ ಯಾರೆಂಬ ಚರ್ಚೆ ಬಿರುಸಾಗಿರುವ ಹೊತ್ತಿನಲ್ಲೇ, ‘ಮಂತ್ರಿ ಮಂಡಲದಿಂದ ಹೊರಗಿರುವವರಿಗೆ ಅವಕಾಶ ಕೊಡಲೇಬೇಕೆಂಬ ವಿಚಾರವನ್ನು ಪಕ್ಷದ ವರಿಷ್ಠರು ಆರಂಭದಲ್ಲಿ ಹೇಳಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಕೃಷ್ಣ ಬೈರೇಗೌಡ ಅವರು, ‘ಹೊರಗಿರುವವರಿಗೆ ಅವಕಾಶ ಕಲ್ಪಿಸುವ ವಿಷಯವನ್ನು ವರಿಷ್ಠರು ಎಲ್ಲರಿಗೂ ಸ್ಪಷ್ಟಪಡಿಸಿದ್ದರು. ಇದೇನೂ ಹೊಸ ವಿಚಾರ ಅಲ್ಲ. ಯಾರಿಗೆ ಅವಕಾಶ ನೀಡಬೇಕು ಎನ್ನುವುದನ್ನು ಸೂಕ್ತ ಸಂದರ್ಭದಲ್ಲಿ ಅವರು ನಿರ್ಧರಿಸುತ್ತಾರೆ’ ಎಂದರು.

ADVERTISEMENT

ಆದರೆ, ನಾಯಕತ್ವ ಬದಲಾವಣೆ ಮತ್ತು ಈ ಅವಕಾಶ ಒಟ್ಟಿಗೆ ಆಗಲಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಅವರು ನಿರಾಕರಿಸಿದರು.

‘ಅರ್ಹತೆ ಇರುವವರಿಗೆ ಸಂಪುಟದಲ್ಲಿ ಅವಕಾಶ ಸಿಗಬೇಕು. ಆದರೆ, ನಾಯಕತ್ವ ಬದಲಾವಣೆ ಹೈಕಮಾಂಡ್​ಗೆ ಬಿಟ್ಟಿದ್ದು. ಸಂಪುಟ ಪುನರ್‌ರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ’ ಎಂದರು.

‘ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನ ನೀಡಿದೆ. ಅರ್ಹತೆ ಮೀರಿ ಅವಕಾಶ ಕೊಟ್ಟಿದೆ. ಸಚಿವ ಸ್ಥಾನದಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಅವಕಾಶದ ವಿಚಾರದಲ್ಲಿ ನನಗೆ ಸಂತೃಪ್ತಿ ಇದೆ. ಆದರೆ, ಕೆಲಸದಲ್ಲಿ ಅಲ್ಲ. ಇನ್ನೂ ಮಾಡುವ ಕೆಲಸ ಬಾಕಿ ಇದೆ’ ಎಂದರು.

ಸಿದ್ದರಾಮಯ್ಯ ಅವರ ‘ಉತ್ತರಾಧಿಕಾರಿ’ ವಿಚಾರದಲ್ಲಿ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಇಂತಹ ವಿಷಯಗಳ ಬಗ್ಗೆ ನಾನು‌ ಮಾತನಾಡುವುದಿಲ್ಲ. ಮುಖ್ಯಮಂತ್ರಿ ನನಗೆ ಜವಾಬ್ದಾರಿ, ಕೆಲಸ ಕೊಟ್ಟಿದ್ದಾರೆ. ರಾಜಕೀಯ ‌ಮಾತನಾಡಲು ಪಕ್ಷದ ಚೌಕಟ್ಟಿದೆ. ಹೈಕಮಾಂಡ್ ಇದೆ. ಅಲ್ಲಿ ಏನು ಹೇಳಬೇಕು ಹೇಳುತ್ತೇನೆ’ ಎಂದರು.

‘ಒಬ್ಬೊಬ್ಬರದು ಒಂದು ಅಭಿಪ್ರಾಯ ಇರುತ್ತದೆ. ಐದು ಬೆರಳು ಸಮಾನವಾಗಿರುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಅವರೇ ಎಲ್ಲವನ್ನೂ ತೀರ್ಮಾನಿಸುತ್ತಾರೆ. ಬಿಜೆಪಿಗರಿಗೆ ಅಧಿಕಾರದ ಹಪಹಪಿ. ಬಿಜೆಪಿಗರು ದ್ರಾಕ್ಷಿ ಗೊಂಚಲು ಹುಳಿ ಎನ್ನುವ ರೀತಿಯಲ್ಲಿ ರಾಜಕೀಯ ಮಾತನಾಡಿ ಬೇಳೆ ಬೇಯಿಸಿಕೊಳ್ಳುತ್ತಾರೆ. ಬಿಜೆಪಿಗರಿಗೆ ಬೇರೆ ಕೆಲಸ ಇಲ್ಲ’ ಎಂದು ಟೀಕಿಸಿದರು.

ಪಕ್ಷದ ವರಿಷ್ಠರ ಮಾತಿಗೆ ನಾವೆಲ್ಲರೂ (ಸಚಿವರು) ಅವತ್ತು ಒಪ್ಪಿದ್ದೇವೆ. ನಾನು ಆ ಮಾತಿಗೆ ಈಗಲೂ ಬದ್ಧನಾಗಿದ್ದೇನೆ.
- ಕೃಷ್ಣ ಬೈರೇಗೌಡ ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.