ADVERTISEMENT

‘ಕೈ’ ಅಭ್ಯರ್ಥಿ ಪಟ್ಟಿ 11ರಂದು ಅಂತಿಮ

ರಾಜ್ಯ ಚುನಾವಣಾ ಸಮಿತಿಯಿಂದ ಸಂಭವನೀಯರ ಹೆಸರು ಸಿದ್ಧ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 20:04 IST
Last Updated 7 ಮಾರ್ಚ್ 2019, 20:04 IST
   

ಬೆಂಗಳೂರು: ಹದಿಮೂರು ಲೋಕಸಭಾ ಕ್ಷೇತ್ರಗಳಿಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಗುರುವಾರ ಸಿದ್ಧಪಡಿಸಿದ್ದಾರೆ.

ಬಾಗಲಕೋಟೆ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಜಯಪುರ ಕ್ಷೇತ್ರದ ಸಂಭವನೀಯರ ಪಟ್ಟಿಯನ್ನು ಸಚಿವ ಎಂ.ಬಿ. ಪಾಟೀಲ ಅವರು ಸ್ಥಳೀಯರ ಜೊತೆ ಚರ್ಚಿಸಿ ಒಂದೆರಡು ದಿನಗಳಲ್ಲಿ ಕೆಪಿಸಿಸಿಗೆ ನೀಡಲಿದ್ದಾರೆ.

ಎಐಸಿಸಿ ರಾಜ್ಯ ಸಹ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ ಕ್ಷೇತ್ರಗಳಲ್ಲಿರುವ ಆಕಾಂಕ್ಷಿಗಳು ಮತ್ತು ಪಕ್ಷದ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಆಕಾಂಕ್ಷಿಗಳ ಹೆಸರುಗಳನ್ನು ಕೆಪಿಸಿಸಿಗೆ ನೀಡಿದ್ದರು.

ADVERTISEMENT

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯೆ ಕ್ಷೇತ್ರಹಂಚಿಕೆ ಸಂಬಂಧಿಸಿದ ಚರ್ಚೆ ನಡೆದ ಬೆನ್ನಲ್ಲೆ, ರಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ಗುರುವಾರ ನಡೆದ ಪಕ್ಷದ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಈ ಪಟ್ಟಿಯಲ್ಲಿರುವ ಹೆಸರುಗಳ ಕುರಿತು ಚರ್ಚೆ ನಡೆಯಿತು.

ಪಕ್ಷದ ಹಾಲಿ ಸಂಸದರಿರುವ 10, ಜೆಡಿಎಸ್‌ ಪ್ರತಿನಿಧಿಸುತ್ತಿರುವ ಎರಡು ಮತ್ತು ಜೆಡಿಎಸ್‌ ಪಕ್ಷಕ್ಕೆ ಈಗಾಗಲೇ ಬಿಟ್ಟುಕೊಟ್ಟಿರುವ ಶಿವಮೊಗ್ಗ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ಕುರಿತು ಸುಮಾರು ಎರಡು ಗಂಟೆ ‘ಕೈ’ ನಾಯಕರು ಚರ್ಚೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಕ್ಷೇತ್ರ ಹಂಚಿಕೆ ಬಗ್ಗೆ ರಾಹುಲ್ ಗಾಂಧಿ ಮತ್ತು ದೇವೇಗೌಡರು ಬುಧವಾರ ಚರ್ಚೆ ನಡೆಸಿದ್ದಾರೆ. ನಾವು ಈ ವಿಚಾರ ಚರ್ಚೆ ಮಾಡಿಲ್ಲ. ಇದೇ 11ರಂದು ನಾವೆಲ್ಲರೂ ದೆಹಲಿಗೆ ಹೋಗುತ್ತೇವೆ. ಅಲ್ಲಿ ಎಲ್ಲವೂ ಅಂತಿಮವಾಗಲಿದೆ’ ಎಂದರು.

‘13 ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೆಲವು ಕ್ಷೇತ್ರಗಳಿಗೆ 4–5 ಅಭ್ಯರ್ಥಿಗಳ ಹೆಸರುಗಳಿವೆ. ಬೀದರ್, ಬೆಂಗಳೂರು ಕೇಂದ್ರ, ಹಾವೇರಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡುವಂತೆ ಬೇಡಿಕೆ ಇದೆ. ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಲಿದ್ದು, ಅಲ್ಪಸಂಖ್ಯಾತರ ಬೇಡಿಕೆಯ ಬಗ್ಗೆಯೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಶಿವಕುಮಾರ್ ಗರಂ

ತಡವಾಗಿ ಬಂದ ಸಚಿವ ಡಿ.ಕೆ. ಶಿವಕುಮಾರ್‌, ಸಭೆಗೆ ಆಹ್ವಾನ ನೀಡಿಲ್ಲ ಎಂದು ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿವಕುಮಾರ್‌ ಬರುವಷ್ಟರಲ್ಲಿ ಸಭೆ ಬಹುತೇಕ ಅಂತ್ಯವಾಗಿತ್ತು. ಹೀಗಾಗಿ, ಅವರು ಗೊಣಗುತ್ತಲೇ ಹೋಟೆಲ್‌ನಿಂದ ಹೊರಹೋದರು.

ಸೀಟು ಹಂಚಿಕೆ ಕಗ್ಗಂಟು

ಜೆಡಿಎಸ್‌– ಕಾಂಗ್ರೆಸ್‌ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಹುತೇಕ ತೀರ್ಮಾನವಾಗಿದೆ. ಆದರೆ, ಮೈಸೂರು ಕ್ಷೇತ್ರದ ಬಗ್ಗೆ ಉಭಯ ಪಕ್ಷಗಳು ಪಟ್ಟು ಸಡಿಲಿಸಿಲ್ಲ. ಅಲ್ಲದೆ, ಜೆಡಿಎಸ್‌ ಬೇಡಿಕೆ ಇಟ್ಟಿರುವ ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು ಕ್ಷೇತ್ರಗಳ ಬಗ್ಗೆಯೂ ಗೊಂದಲ ಮುಂದುವರಿದಿದೆ. ಯಾವ ಕ್ಷೇತ್ರ ಯಾರಿಗೆ ಮತ್ತು ಯಾಕೆ ಎನ್ನುವುದನ್ನು ಅಂತಿಮಗೊಳಿಸಿ ಮಾಹಿತಿ ನೀಡುವಂತೆ ಪಕ್ಷದ ರಾಜ್ಯ ನಾಯಕರಿಗೆ ರಾಹುಲ್‌ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.

‘ಕೈ’ ಸಂಭವನೀಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು ಕೇಂದ್ರ; ಬಿ.ಕೆ. ಹರಿಪ್ರಸಾದ್‌, ಸಲೀಂ ಅಹ್ಮದ್‌, ರಿಜ್ವಾನ್‌ ಅರ್ಷಾದ್‌, ರೋಷನ್‌ ಬೇಗ್‌, ಎಚ್‌.ಟಿ. ಸಾಂಗ್ಲಿಯಾನ

ಬೆಂಗಳೂರು ದಕ್ಷಿಣ; ರಾಮಲಿಂಗಾರೆಡ್ಡಿ, ಪ್ರಿಯಾಕೃಷ್ಣ

ಬೆಂಗಳೂರು ಉತ್ತರ; ಎಂ.ನಾರಾಯಣಸ್ವಾಮಿ, ಕೃಷ್ಣ ಬೈರೇಗೌಡ, ಸಿ. ನಾರಾಯಣಸ್ವಾಮಿ, ರಾಜ್‌ಕುಮಾರ್‌, ರಾಜೀವ್‌ಗೌಡ

ಉತ್ತರ ಕನ್ನಡ; ಭೀಮಣ್ಣ ನಾಯ್ಕ್, ಬಿ.ಕೆ. ಹರಿಪ್ರಸಾದ್, ಸತೀಶ್‌ ಸೈಲ್‌, ಶ್ರೀಕಾಂತ ಘೋಟ್ನೇಕರ

ಬೆಳಗಾವಿ; ಅಂಜಲಿ ನಿಂಬಾಳಕರ, ಚನ್ನರಾಜ್ ಹೆಬ್ಬಾಳಕರ ( ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ), ನಾಗರಾಜ್ ಯಾದವ್,

ಬೀದರ್; ಈಶ್ವರ್ ಖಂಡ್ರೆ, ವಿಜಯ್ ಸಿಂಗ್, ಮನ್ನಾನ್‌ ಸೇಠ್‌

ಕೊಪ್ಪಳ; ಬಸವರಾಜ್ ಹಿಟ್ನಾಳ, ಬಸನಗೌಡ ಬಾದರ್ಲಿ, ಬಸವರಾಜ ರಾಯರಡ್ಡಿ, ಕೆ. ವಿರೂಪಾಕ್ಷಪ್ಪ

ಹಾವೇರಿ; ಬಸವರಾಜ ಶಿವಣ್ಣವರ, ಸಲೀಂ ಅಹಮದ್, ಡಿ.ಆರ್. ಪಾಟೀಲ, ಜಿ.ಎಸ್‌. ಪಾಟೀಲ. ಗಡ್ಡದೇವರಮಠ್

ಧಾರವಾಡ; ವಿನಯಕುಲಕರ್ಣಿ, ವೀರಣ್ಣ ಮತ್ತಿಕಟ್ಟೆ, ಶಾಖೀರ್ ಸನದಿ (ಐ.ಜಿ. ಸನದಿ ಪುತ್ರ), ಅನಿಲ್‌ಕುಮಾರ ಪಾಟೀಲ, ಎ.ಎಂ. ಹಿಂಡಸಗೇರಿ, ಮಹೇಶ ನಾಲ್ವಡ

ದಾವಣಗೆರೆ; ಶಾಮನೂರ ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ

ಉಡುಪಿ– ಚಿಕ್ಕಮಗಳೂರು; ಪ್ರಮೋದ್ ಮಧ್ವರಾಜ್‌, ಆರತಿಕೃಷ್ಣ, ಸಂದೀಪ್‌, ಡಿ.ಎಲ್. ವಿಜಯಕುಮಾರ್

ದಕ್ಷಿಣಕನ್ನಡ; ರಮಾನಾಥ ರೈ, ವಿನಯಕುಮಾರ್‌ ಸೊರಕೆ, ರಾಜೇಂದ್ರಕುಮಾರ್‌, ಮಿಥುನ್‌ ರೈ

ಮೈಸೂರು; ಸಿ.ಎಚ್‌. ವಿಜಯಶಂಕರ್‌, ಸೂರಜ್‌ ಹೆಗ್ಡೆ, ವಿಜಯಕುಮಾರ್‌

ಶಿವಮೊಗ್ಗ; ಮಧು ಬಂಗಾರಪ್ಪ (ಜೆಡಿಎಸ್‌)

ಕಾಂಗ್ರೆಸ್‌ ಹಾಲಿ ಸಂಸದರಿರುವ ಕ್ಷೇತ್ರಗಳು: ಚಿಕ್ಕೋಡಿ– ಪ್ರಕಾಶ್‍ ಹುಕ್ಕೇರಿ, ಕಲಬುರ್ಗಿ– ಮಲ್ಲಿಕಾರ್ಜುನ ಖರ್ಗೆ, ರಾಯಚೂರು– ಬಿ.ವಿ. ನಾಯಕ, ಚಿತ್ರದುರ್ಗ– ಬಿ.ಎನ್. ಚಂದ್ರಪ್ಪ, ಬಳ್ಳಾರಿ– ವಿ.ಎಸ್. ಉಗ್ರಪ್ಪ, ತುಮಕೂರು– ಎಸ್.ಪಿ. ಮುದ್ದಹನುಮೇಗೌಡ, ಚಾಮರಾಜನಗರ– ಆರ್. ಧ್ರುವನಾರಾಯಣ್, ಬೆಂಗಳೂರು ಗ್ರಾಮಾಂತರ– ಡಿ.ಕೆ. ಸುರೇಶ್, ಚಿಕ್ಕಬಳ್ಳಾಪುರ– ಎಂ. ವೀರಪ್ಪ ಮೊಯಿಲಿ, ಕೋಲಾರ– ಕೆ.ಎಚ್. ಮುನಿಯಪ್ಪ

ಜೆಡಿಎಸ್‌ ಸಂಸದರಿರುವ ಕ್ಷೇತ್ರಗಳು: ಹಾಸನ– ಎಚ್‌.ಡಿ. ದೇವೇಗೌಡ, ಮಂಡ್ಯ–ಎಲ್.ಆರ್. ಶಿವರಾಮೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.