ADVERTISEMENT

ವಿಧಾನಸಭೆ ಚುನಾವಣೆ: ಶೀಘ್ರದಲ್ಲಿ ವರಿಷ್ಠರ ‘ಕೈ’ ಸೇರಲಿದೆ ಅಭ್ಯರ್ಥಿಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:26 IST
Last Updated 7 ಫೆಬ್ರುವರಿ 2023, 4:26 IST
   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲು ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಈ ಪಟ್ಟಿಯು ಶೀಘ್ರದಲ್ಲಿ ವರಿಷ್ಠರ ಕೈ ಸೇರಲಿದೆ.

120ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಸೋಮವಾರ ನಗರಕ್ಕೆ ಬಂದ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಟ್ಟಿಯನ್ನು ಅಂತಿಮಗೊಳಿಸುವ ಕುರಿತಂತೆ ಕೆಲವು ನಾಯಕರ ಜೊತೆ ಚರ್ಚೆ ನಡೆಸಿದರು.

ಮೊದಲ ಹಂತದ ಪಟ್ಟಿ ಸಿದ್ಧಪಡಿಸುವ ಸಂಬಂಧ ಚುನಾವಣಾ ಸಮಿತಿಯ ಮಹತ್ವದ ಸಭೆ ಫೆ. 2ರಂದು ನಡೆದಿತ್ತು. ಈ ಸಭೆಯಲ್ಲಿ 140 ಕ್ಷೇತ್ರಗಳಿಗೆ ಸಂಭವನೀಯರ ಪಟ್ಟಿ ಸಿದ್ಧಪಡಿಸುವ ಕುರಿತು ಸಮಾಲೋಚನೆ ನಡೆದಿತ್ತು. ಆದರೆ, ಗೊಂದಲ ನಿರ್ಮಾಣ ಆಗಬಹುದೆಂಬ ಕಾರಣಕ್ಕೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿರಲಿಲ್ಲ.

ADVERTISEMENT

‘ಮೊದಲ ಪಟ್ಟಿಯನ್ನು ರಾಜ್ಯದಿಂದ ಕಳುಹಿಸುವ ಮೊದಲು ಎಚ್ಚರಿಕೆ ವಹಿಸಲು ನಾಯಕರು ಮುಂದಾಗಿದ್ದಾರೆ. ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಜೊತೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಮೊದಲ ಪಟ್ಟಿ ಹೈಕಮಾಂಡ್‌ಗೆ ರವಾನೆ ಆಗಲಿದೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

ಟಿಕೆಟ್‌ಗೆ ದುಂಬಾಲು: ‘ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚುತ್ತಿದ್ದು, ಅವಕಾಶ ತಪ್ಪಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮೇಲೆ ಕೆಲವರು ನಿರಂತರ ಒತ್ತಡ ಹೇರುತ್ತಿದ್ದಾರೆ. ಅನೇಕ ಆಕಾಂಕ್ಷಿಗಳು ಈ ಇಬ್ಬರ ಹಿಂದೆ ಬಿದ್ದಿದ್ದಾರೆ. ಪ್ರಜಾಧ್ವನಿ ಯಾತ್ರೆಯಲ್ಲೂ ನಾಯಕರಿಗೆ ದುಂಬಾಲು ಬೀಳುತ್ತಿದ್ದಾರೆ’ ಎಂದೂ ಅವರು ಹೇಳಿದರು.

‘ಆದರೆ, ಆಕಾಂಕ್ಷಿಗಳ ಒತ್ತಡದಿಂದ ಪಾರಾಗಲು ಹೈಕಮಾಂಡ್ ಕಡೆ ಬೊಟ್ಟು ಮಾಡುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌, ‘ಗೆಲುವಿನ‌ ಮಾನದಂಡವನ್ನಷ್ಟೇ ಹೈಕಮಾಂಡ್ ಪರಿಗಣಿಸಲಿದೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿ. ಗೆಲ್ಲುವವರಿಗೆಟಿಕೆಟ್ ಸಿಕ್ಕೇ ಸಿಗಲಿದೆ’ ಎನ್ನುತ್ತಿದ್ದಾರೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.