ADVERTISEMENT

ಕಾಂಗ್ರೆಸ್ ಶಾಸಕಾಂಗ ಸಭೆಗೆ ಎಂಟಿಬಿ ನಾಗರಾಜ್, ಕೆ.ಸುಧಾಕರ್ ಸೇರಿ 8 ಶಾಸಕರು ಗೈರು

ಸೌಮ್ಯಾರೆಡ್ಡಿ ಹಾಜರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:15 IST
Last Updated 9 ಜುಲೈ 2019, 20:15 IST
ಕಾಂಗ್ರೆಸ್‌ನ ಸಿಎಲ್‌ಪಿ ಸಭೆಯಲ್ಲಿ ಈಶ್ವರ್ ಖಂಡ್ರೆ, ಜಿ.ಪರಮೇಶ್ವರ, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್‌, ದಿನೇಶ್‌ ಗುಂಡೂ ರಾವ್ ಇದ್ದಾರೆ.
ಕಾಂಗ್ರೆಸ್‌ನ ಸಿಎಲ್‌ಪಿ ಸಭೆಯಲ್ಲಿ ಈಶ್ವರ್ ಖಂಡ್ರೆ, ಜಿ.ಪರಮೇಶ್ವರ, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್‌, ದಿನೇಶ್‌ ಗುಂಡೂ ರಾವ್ ಇದ್ದಾರೆ.   

ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಈಗಾಗಲೇ ಜರ್ಜರಿತರಾಗಿರುವ ಪಕ್ಷದ ಮುಖಂಡರು, ಮಂಗಳವಾರ ಕರೆದಿದ್ದಶಾಸಕಾಂಗ ಪಕ್ಷದ ಸಭೆಗೆ 8 ಶಾಸಕರು ಗೈರು ಹಾಜರಾಗಿದ್ದು ನಾಯಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಶಾಸಕರ ಗೈರು ಹಾಜರಿ ಪರಿಣಾಮಗಳ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ರಾಜೀನಾಮೆ ನೀಡಿದರೆ ಎಂಬ ಆತಂಕ ಕಾಡುತ್ತಿದೆ. ಮುಂದೆ ಯಾವ ಶಾಸಕರೂ ರಾಜೀನಾಮೆ ನೀಡದಂತೆ ನೋಡಿಕೊಳ್ಳುವುದು. ಅಂತಹವರ ಜತೆ ಮಾತುಕತೆ ನಡೆಸಿ ಮನವೊಲಿಸಲು ಮುಖಂಡರು ಮುಂದಾಗಿದ್ದಾರೆ.

ಶಾಸಕಾಂಗ ಪಕ್ಷದ ಸಭೆಗೆ ಒಟ್ಟು 19 ಶಾಸಕರು ಗೈರು ಹಾಜರಾಗಿದ್ದು, ಇದರಲ್ಲಿ 10 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರೋಷನ್ ಬೇಗ್ ಮಂಗಳವಾರ ರಾಜೀನಾಮೆ ಸಲ್ಲಿಸಿದರು. ಈಗಾಗಲೇ ರಾಜೀನಾಮೆ ಸಲ್ಲಿಸಿರುವ ರಾಮಲಿಂಗಾರೆಡ್ಡಿ ಸಭೆಗೆ ಬಂದಿರಲಿಲ್ಲ. ಆದರೆ ಅವರ ಪುತ್ರಿ ಸೌಮ್ಯಾರೆಡ್ಡಿ ಹಾಜರಿದ್ದರು. ಸೌಮ್ಯಾ ಅವರು ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ಚರ್ಚಿಸಿದ್ದರು.

ADVERTISEMENT

ಅನಾರೋಗ್ಯ ಕಾರಣಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ (ಸಂಡೂರು), ಶಾಸಕ ಟಿ.ಡಿ.ರಾಜೇಗೌಡ (ಶೃಂಗೇರಿ), ವೈಯಕ್ತಿಕ ಸಮಸ್ಯೆಯಿಂದಾಗಿ ಶಾಸಕಿ ಕನೀಜ್ ಫಾತಿಮಾ (ಕಲಬುರ್ಗಿ ಉತ್ತರ) ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದು, ಮೊದಲೇ ಅನುಮತಿ ಪಡೆದುಕೊಂಡಿದ್ದಾರೆ.

ಕೊಟ್ಟ ಕಾರಣಗಳು

ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸಭೆಗೆ ಬಾರದಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದು, ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸುತ್ತಲೇ ಬಂದಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಕೆ.ಸುಧಾಕರ್ (ಚಿಕ್ಕಬಳ್ಳಾಪುರ) ನಡೆ ಸಹ ಕಾಂಗ್ರೆಸ್ ನಾಯಕರನ್ನು ಆತಂಕಕ್ಕೆ ದೂಡಿದೆ. ರಾಜೀನಾಮೆ ಬಗ್ಗೆ ಸಮಯ ಬಂದಾಗ ನಿರ್ಧರಿಸುವುದಾಗಿ ಹೇಳುತ್ತಾ ಬಂದಿದ್ದು, ಈಗ ಅವರ ನಡೆಯ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕಿದೆ.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ (ಹೊಸಕೋಟೆ) ಅನಾರೋಗ್ಯದ ಕಾರಣ ನೀಡಿ ಗೈರು ಹಾಜರಾಗಿದ್ದರು. ಸೋಮವಾರ ಕಾಂಗ್ರೆಸ್ ಸಚಿವರಿಗೆ ಏರ್ಪಡಿಸಿದ್ದ ಉಪಾಹಾರ ಕೂಟಕ್ಕೂ ಆರಂಭದಲ್ಲಿ ಬಂದಿರಲಿಲ್ಲ. ನಂತರ ದೂರವಾಣಿ ಕರೆಮಾಡಿದ ನಂತರ ಬಂದು ಭಾಗವಹಿಸಿದ್ದರು. ಆ ಸಮಯದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿ ‘ಯಾವ ರಾಜೀನಾಮೆಯನ್ನೂ ನೀಡುವುದಿಲ್ಲ, ಮುಂಬೈಗೂ ಹೋಗುವುದಿಲ್ಲ. ವೈಯಕ್ತಿಕ ಕೆಲಸವಿದ್ದರೆ ಮಾತ್ರ ಮುಂಬೈಗೆ ಹೋಗುತ್ತೇನೆ’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದರು.ಇಂದಿನ ಸಭೆಗೂ ಬಾರದಿರುವುದನ್ನು ಗಮನಿಸಿದರೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಎಸ್.ರಾಮಪ್ಪ (ಹರಿಹರ) ಸಹ ‘ಆಪರೇಷನ್ ಕಮಲಕ್ಕೆ’ ತುತ್ತಾಗಿರಬಹುದು ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ರೋಷನ್ ಬೇಗ್ ರಾಜೀನಾಮೆ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಿ, ಪಕ್ಷದಿಂದ ಅಮಾನತುಗೊಂಡಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಭೇಟಿಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು. ಇದರಿಂದಾಗಿ ಈವರೆಗೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಶಾಸಕರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಜೆಡಿಎಸ್‌ನ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಮೈತ್ರಿ ಪಕ್ಷದ 14 ಮಂದಿ ರಾಜೀನಾಮೆ ನೀಡಿದಂತಾಗಿದೆ.

ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದ ಶಿಷ್ಯರು

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಈಗ ಅವರ ಅತ್ಯಾಪ್ತ ಬೆಂಬಲಿಗ ಶಾಸಕರೇ ತಿರುಗಿ ಬಿದ್ದಿದ್ದಾರೆ.

‘ಜೆಡಿಎಸ್ ಬಿಟ್ಟು ಬಂದ ಸಮಯದಲ್ಲಿ ನೀವೇ ಅನರ್ಹತೆ ಭೀತಿಗೆ ಸಿಲುಕಿದ್ದೀರಿ. ಆಗ ನಾವೇ ನಿಮ್ಮ ನೆರವಿಗೆ ಬರಬೇಕಾಯಿತು. ಈಗ ನಮ್ಮ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದೀರಿ. ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಗುಡುಗಿದ್ದಾರೆ.

ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳುವಂತೆ ವಿಧಾನ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲು ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಸಭೆಯ ನಂತರ ಈ ವಿಷಯವನ್ನು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು. ‘ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಈಗಲೂ ವಾಪಸ್ ಬನ್ನಿ. ರಾಜೀನಾಮೆ ಹಿಂದಕ್ಕೆ ಪಡೆದುಕೊಳ್ಳಿ’ ಎಂದು ಮನವಿ ಮಾಡಿದರು.

ಬಿಜೆಪಿ ಹೊಸ್ತಿಲಲ್ಲಿ ಸುಧಾಕರ್?

ಚಿಕ್ಕಬಳ್ಳಾಪುರ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಡಾ.ಕೆ.ಸುಧಾಕರ್ ಅವರು ಶೀಘ್ರದಲ್ಲಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

ಕಳೆದ ನಾಲ್ಕೈದು ದಿನಗಳಿಂದ ಸುಧಾಕರ್ ಅವರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹರಿದಾಡುತ್ತಲೇ ಇತ್ತು. ಆದರೆ ಈ ಕುರಿತು ಸುಧಾಕರ್ ಅವರು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಬದಲು ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜೀನಾಮೆ ವದಂತಿ ಬಗ್ಗೆ ಮೌನ ಮುರಿಯದ ಸುಧಾಕರ್ ಅವರ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸುಧಾಕರ್ ಅವರು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರು. ಆದರೂ ಅವರು ಮಂಗಳವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗದೆ ಇದ್ದದ್ದು ವದಂತಿಗೆ ಪುಷ್ಟಿ ನೀಡುವಂತೆ ಇತ್ತು. ಜ್ವರದ ನೆಪದಲ್ಲಿ ದಿನವೀಡಿ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿಯೇ ಉಳಿದ ಸುಧಾಕರ್ ಅವರು ಹೊರಗಡೆ ಕಾಣಿಸಿಕೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.