ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿ ಫೇಸ್‌ಬುಕ್ ಮತ್ತು ‘X’ ಖಾತೆಯಲ್ಲಿ ‘ಪೋಸ್ಟ್’ ಮಾಡಿದ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ, ಫೇಸ್‌ಬುಕ್ ಖಾತೆಯ ಅಡ್ಮಿನ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಹೈಗ್ರೌಂಡ್ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು ನೀಡಿದೆ. ಇದರ ಬೆನ್ನಲ್ಲೇ ಆ ಪೋಸ್ಟ್ ಅನ್ನು ಬಿಜೆಪಿ ತೆಗೆದುಹಾಕಿದೆ.
‘ಸಿದ್ದರಾಮಯ್ಯ ಪತ್ರಿಕೆಯೊಂದನ್ನು ಓದುತ್ತಿರುವಂತೆ ಬಿಂಬಿಸಿ, ಆ ಪತ್ರಿಕೆಯಲ್ಲಿ ಅವಹೇಳನಕಾರಿ ಬರಹಗಳು ಕಾಣುವಂತೆ ಮಾಡಲಾಗಿದೆ. ‘ದಕ್ಷಿಣದಿಂದ ಆರಂಭವಾಗುವ ಮೋದಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗುವುದು ಖಚಿತ, ನಿಶ್ಚಿತ, ಖಂಡಿತ. ಹೀಗಾಗಿ ಪಾ‘ಕೈ’ಸ್ತಾನಿಗಳಿಗೆ ಸುವರ್ಣಾವಕಾಶ. ದೇಶ, ಧರ್ಮ, ಜಾತಿ ವಿಭಜಕ ಮನಸ್ಥಿತಿಯವರು ಕೂಡಲೇ ಅರ್ಜಿ ಹಾಕಿ’ ಎಂದು ಉಲ್ಲೇಖಿಸಿ, ‘ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಕ್ಷಮಿಸುವ ಪಾ'ಕೈ'ಸ್ತಾನಿ ಮನಸ್ಥಿತಿ ಹೊಂದಿರಬೇಕು’ ಎಂದೆಲ್ಲ ತಪ್ಪು ಮಾಹಿತಿಯಿಂದ ಕೂಡಿರುವ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದೆ. ದ್ವೇಷ ಭಾವನೆ ಮೂಡಿಸಲು ಪದೇ ಪದೇ ಪಾಕಿಸ್ತಾನದ ಜೊತೆಗೆ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಸೇರಿಸಿ ಪೋಸ್ಟ್ ಮಾಡಲಾಗಿದೆ’ ಎಂದು ಕಾಂಗ್ರೆಸ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಚುನಾವಣೆ ಸಂದರ್ಭದಲ್ಲಿ ಧರ್ಮ, ಮತಗಳ ಆಧಾರದಲ್ಲಿ ಇಂತಹ ಪೋಸ್ಟ್ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ, ಕಾನೂನಿನಡಿ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರಿನಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್. ನಟರಾಜ್ ಗೌಡ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.