ADVERTISEMENT

ಆರಗ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 16:22 IST
Last Updated 8 ಏಪ್ರಿಲ್ 2022, 16:22 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ಬೆಂಗಳೂರು: ಜಗಜೀವನರಾಂ ನಗರದಲ್ಲಿ ನಡೆದ ಚಂದ್ರಶೇಖರ್‌ ಕೊಲೆ ಪ್ರಕರಣದಲ್ಲಿ ಖಚಿತ ಮಾಹಿತಿ ಇಲ್ಲದೇ ಮತೀಯ ಸಂಘರ್ಷಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಮುಖಂಡರಾದ ವಿ.ಎಸ್‌. ಉಗ್ರಪ್ಪ ಮತ್ತು ಎಚ್‌.ಎಂ. ರೇವಣ್ಣ, ‘ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿಕೊಂಡು ರಾಜ್ಯಕ್ಕೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಗೃಹ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಬೈಕ್‌ಗಳ ಡಿಕ್ಕಿಯಾದ ಬಳಿಕ ನಡೆದ ಗಲಾಟೆಯಲ್ಲಿ ಕೊಲೆಯಾಗಿದೆ ಎಂದು ಪೊಲೀಸ್‌ ಕಮಿಷನರ್‌ ಟ್ವೀಟ್‌ ಮಾಡಿದ್ದರು. ಆದರೆ, ಉರ್ದು ಭಾಷೆಯಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಕೊಲೆ ನಡೆದಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಗೃಹ ಸಚಿವರೇ ತಪ್ಪು ಮಾಡಿದ್ದಾರೆ. ಅವರ ವಿರುದ್ಧ ನಾವು ದೂರು ಸಲ್ಲಿಸಿದ್ದರೂ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ’ ಎಂದು ರಾಮಲಿಂಗಾ ರೆಡ್ಡಿ ದೂರಿದರು.

ADVERTISEMENT

ನಿಷ್ಪ್ರಯೋಜಕ ಸಚಿವ: ‘ಜ್ಞಾನೇಂದ್ರ ರಾಜ್ಯ ಕಂಡ ಅತ್ಯಂತ ನಿಷ್ಪ್ರಯೋಜಕ, ಭ್ರಷ್ಟ ಮತ್ತು ಪ್ರಚೋದನಕಾರಿ ಗೃಹ ಸಚಿವ. ನಿರಂತರವಾಗಿ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ರಸ್ತೆಯಲ್ಲಿ ನಡೆದ ಜಗಳಕ್ಕೆ ಮತೀಯ ಬಣ್ಣ ನೀಡುವ ಮೂಲಕ ಅಪರಾಧ ಎಸಗಿದ್ದಾರೆ. ಧರ್ಮದ ಆಧಾರದಲ್ಲಿ ಗಲಭೆಗೆ ಪ‍್ರಚೋದನೆ, ಪಿತೂರಿ, ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪದಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಉಗ್ರಪ್ಪ ಆಗ್ರಹಿಸಿದರು.

ಗೃಹ ಸಚಿವರು ಯಾವ ಮುಖ ಇಟ್ಟುಕೊಂಡು ಆ ಹುದ್ದೆಯಲ್ಲಿ ಮುಂದುವರಿಯುತ್ತಾರೆ? ಮನಸ್ಸಿಗೆ ಬಂದಂತೆ ಮಾತನಾಡುವ ಸಿ.ಟಿ. ರವಿ ಅವರನ್ನು ಒಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ನಲು ಸಾಧ್ಯವೆ? ಆರ್‌ಎಸ್‌ಎಸ್‌ ಶಾಖೆಯಲ್ಲಿ ಇದನ್ನೇ ಕಲಿಸುವುದಾ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರ್‌ಎಸ್‌ಎಸ್‌ ಮುಖಂಡರು ಹೇಳಬೇಕು ಎಂದರು.

‘ಗೃಹ ಸಚಿವರ ವಿರುದ್ಧ ಈಗಾಗಲೇ ದೂರು ನೀಡಿದ್ದೇವೆ. ಸರಿಯಾದ ಕ್ರಮ ಜರುಗಿಸದೇ ಇದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ರೇವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.