ಬೆಂಗಳೂರು: ಮೂರು ತಿಂಗಳೊಳಗೆ ದೇಶದ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ದೃಷ್ಟಿಯಿಂದ ನಿತ್ಯವೂ ಒಂದು ಕೋಟಿ ಲಸಿಕೆಯನ್ನು ಉಚಿತವಾಗಿ ವಿತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಗೆ ರಾಜ್ಯಪಾಲರ ಮೂಲಕ ಮನವಿ ಸಲ್ಲಿಸಿದೆ.
ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಶುಕ್ರವಾರ ಭೇಟಿಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ, ಪ್ರತಿ ದಿನದ ಉಚಿತ ಲಸಿಕೆ ವಿತರಣೆಯ ಗುರಿಯನ್ನು 16 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಬೇಕೆಂಬ ಮನವಿ ಸಲ್ಲಿಸಿತು.
‘ಕೇಂದ್ರ ಸರ್ಕಾರ ಒದಗಿಸಿರುವ ಮಾಹಿತಿ ಪ್ರಕಾರ, ಮೇ 31ರವರೆಗೆ 21.31 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 4.45 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ನೀಡಲಾಗಿದೆ. ದೇಶದ ಜನಸಂಖ್ಯೆಯ ಶೇಕಡ 3.17ರಷ್ಟು ಜನರಿಗೆ ಮಾತ್ರ ಎರಡು ಡೋಸ್ ನೀಡಲಾಗಿದೆ. ಇದೇ ವೇಗದಲ್ಲಿ ಲಸಿಕೆ ವಿತರಿಸಿದರೆ ಮೂರು ವರ್ಷಗಳಾದರೂ ಪೂರ್ಣಗೊಳ್ಳುವುದಿಲ್ಲ’ ಎಂದು ಮನವಿ ಹೇಳಿದೆ
ದೇಶದಲ್ಲಿ 140 ಕೋಟಿ ಜನರಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ 39 ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಸಲ್ಲಿಸಿವೆ. ಇದೇ ಸಮಯದಲ್ಲಿ ಕೇಂದ್ರ ಸರ್ಕಾರ 6.63 ಕೋಟಿ ಡೋಸ್ ಲಸಿಕೆಯನ್ನು ರಫ್ತು ಮಾಡಿದೆ. ಇದು ದೇಶದ ಜನರಿಗೆ ಸೇವೆ ಮಾಡಬೇಕಾದ ಸರ್ಕಾರ ಎಸಗಿದ ಮಹಾನ್ ಲೋಪ ಎಂದು ಕೆಪಿಸಿಸಿ ದೂರಿದೆ.
ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ ₹ 150 ಮತ್ತು ರಾಜ್ಯ ಸರ್ಕಾರಕ್ಕೆ ₹ 300ರ ದರದಲ್ಲಿ ಲಸಿಕೆ ಒದಗಿಸುವ ಉತ್ಪಾದಕರು, ಖಾಸಗಿ ಆಸ್ಪತ್ರೆಗಳ ಮೂಲಕ ₹ 600ರಿಂದ ₹ 1,500ರವರೆಗೂ ಮಾರಾಟ ಮಾಡುತ್ತಿವೆ. ಬಡವರು ಲಸಿಕೆ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಲಾಭಕೋರತನಕ್ಕೆ ಸಾಕ್ಷಿ ಎಂದು ಟೀಕಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಶಾಸಕರಾದ ಆರ್.ವಿ. ದೇಶಪಾಂಡೆ ಮತ್ತು ಎಚ್.ಕೆ. ಪಾಟೀಲ ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.