ADVERTISEMENT

ಸಿ.ಎಂ ಬದಲಾವಣೆ ಹೇಳಿಕೆಗೆ ಕಡಿವಾಣ ಹಾಕಿ: ‘ಕೈ’ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ

ಸಚಿವರ ಪ್ರತ್ಯೇಕ ಸಭೆ, ಸಿ.ಎಂ ಬದಲಾವಣೆ ಹೇಳಿಕೆಗೆ ಕಡಿವಾಣ ಹಾಕಿ: ಸಿ.ಎಂಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 16:25 IST
Last Updated 9 ಅಕ್ಟೋಬರ್ 2024, 16:25 IST
ಕಾಂಗ್ರೆಸ್‌
ಕಾಂಗ್ರೆಸ್‌   

ಬೆಂಗಳೂರು: ಕಾಂಗ್ರೆಸ್ ನಾಯಕರು, ಸಚಿವರು ನಡೆಸುತ್ತಿರುವ ಪ್ರತ್ಯೇಕ ಸಭೆಗಳು, ಮುಖ್ಯಮಂತ್ರಿ ಬದಲಾವಣೆ ಹಾಗೂ ದಲಿತ ಮುಖ್ಯಮಂತ್ರಿ ಬೇಡಿಕೆ ಕುರಿತ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕಠಿಣ ಸೂಚನೆ ನೀಡಿದೆ. 

ಆ ಬೆನ್ನಲ್ಲೆ, ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಶಿವಕುಮಾರ್‌ ಈ ಬಗ್ಗೆ ಒಂದು ತಾಸು ಸಮಾಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ನಡುವೆಯೇ ಕೆಲವು ಸಚಿವರು ಗೌಪ್ಯ ಸಭೆ ನಡೆಸಿರುವುದು, ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆಗಳನ್ನು ಗಮನಿಸಿದ ವರಿಷ್ಠರು ಈ ಸೂಚನೆ ನೀಡಿದ್ದಾರೆ. 

ADVERTISEMENT

ಅದರಲ್ಲೂ ‘ದಲಿತ ಮುಖ್ಯಮಂತ್ರಿ’ ವಿಷಯ ಮುನ್ನೆಲೆಯಲ್ಲಿಟ್ಟು ಸತೀಶ ಜಾರಕಿಹೊಳಿ, ಜಿ. ಪರಮೇಶ್ವರ, ಎಚ್‌.ಸಿ. ಮಹದೇವಪ್ಪ ಗೌಪ್ಯ ಸಭೆ ಸೇರಿ ಚರ್ಚೆ ನಡೆಸುತ್ತಿರುವ ಬೆಳವಣಿಗೆಯನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದರು ಎಂದು ಮೂಲಗಳು ಹೇಳಿವೆ.

‘ಸಚಿವರು, ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಪ‍ಕ್ಷಕ್ಕೆ ಮುಜುಗರ ತಂದಿದೆ. ಈ ರೀತಿಯ ಬೆಳವಣಿಗೆಗಳು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಅಸ್ತ್ರವಾಗಿ ಪರಿಣಮಿಸಿದ್ದು, ಆ ಪಕ್ಷಗಳಿಗೆ ರಾಜಕೀಯ ಲಾಭ ತಂದುಕೊಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು,  ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಕರೆ ಮಾಡಿ ಗೊಂದಲಗಳಿಗೆ ತೆರೆ ಎಳೆಯುವಂತೆ ಸಲಹೆ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪಕ್ಷದ ಶಿಸ್ತು ಪಾಲಿಸದ ಸಚಿವರು ಮತ್ತು ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಚಿವರ ಪ್ರತ್ಯೇಕ ಸಭೆಗಳು, ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆಗಳು, ದಲಿತ ಮುಖ್ಯಮಂತ್ರಿ ವಿಚಾರದ ಚರ್ಚೆಗೆ ಕಡಿವಾಣ ಹಾಕಬೇಕು ಎಂದೂ ಹೇಳಿದ್ದರು’ ಎಂದೂ ಮೂಲಗಳು ಹೇಳಿವೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದೊಳಗಿನ ಒಳ ಜಗಳದಿಂದ ಸೋಲಾಗಿದೆ ಎಂಬ ವಿಶ್ಲೇಷಣೆ ಬೆನ್ನಲ್ಲೇ, ಎಚ್ಚೆತ್ತ ವರಿಷ್ಠರು ಕರ್ನಾಟಕದಲ್ಲಿನ ಪಕ್ಷದ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಈ ಸೂಚನೆ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಒಟ್ಟಿಗೆ ಊಟ ಮಾಡಿದರೆ ತಪ್ಪೇನು? ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿಲ್ಲ. ಊಹಾಪೋಹಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ.
–ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಮಹದೇವಪ್ಪ ಹಿರಿಯ ಸಚಿವರು. ಸತೀಶ ಜಾರಕಿಹೊಳಿ ಪ್ರಮುಖ ಖಾತೆ ಹೊಂದಿರುವವರು. ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ರಾಜಕೀಯ ಹೊರತಾಗಿ ಸೇರಿದ್ದಾರೆ.
–ಡಿ.ಕೆ. ಸುರೇಶ್, ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.