ADVERTISEMENT

ದೇಶದಲ್ಲಿ ಬಿಜೆಪಿ ಮುಕ್ತ ದಿನ ಹತ್ತಿರ: ಕಾಂಗ್ರೆಸ್‌ ಮುಖಂಡರ ಆರೋಪ

ಸಂಸ್ಥಾಪನಾ ದಿನದ ಪ್ರಯುಕ್ತ ಜಾಥಾ * ಬೇಡದ ನಿರ್ಧಾರಗಳನ್ನು ಹೇರಿ ಜನರಿಂದಲೇ ದೂರವಾಗುವುದು ನಿಶ್ಚಿತ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 21:10 IST
Last Updated 28 ಡಿಸೆಂಬರ್ 2019, 21:10 IST
ಕಾಂಗ್ರೆಸ್‌ ಪಕ್ಷದ 134ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಮುಖಂಡರು ಮತ್ತು ಶಾಸಕರಾದ ರಾಮಲಿಂಗಾ ರೆಡ್ಡಿ, ಡಿ.ಕೆ.ಶಿವಕುಮಾರ್‌, ಡಾ.ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಸಿದ್ದರಾಮಯ್ಯ ಪಾಲ್ಗೊಂಡಿದ್ದರು
ಕಾಂಗ್ರೆಸ್‌ ಪಕ್ಷದ 134ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಮುಖಂಡರು ಮತ್ತು ಶಾಸಕರಾದ ರಾಮಲಿಂಗಾ ರೆಡ್ಡಿ, ಡಿ.ಕೆ.ಶಿವಕುಮಾರ್‌, ಡಾ.ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಸಿದ್ದರಾಮಯ್ಯ ಪಾಲ್ಗೊಂಡಿದ್ದರು   

ಬೆಂಗಳೂರು: ‘ದೇಶಕ್ಕೆ ಯಾವುದು ಬೇಕಾಗಿಲ್ಲವೋ ಅದನ್ನು ಜಾರಿಗೆ ತರುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಜನರಿಂದಲೇ ದೂರವಾಗುತ್ತಿದೆ. ಕಾಂಗ್ರೆಸ್ ಮುಕ್ತ ದೇಶ ಎಂದು ಹಂಗಿಸಿದವರಿಗೆ ಇದೀಗ ಬಿಜೆಪಿ ಮುಕ್ತ ದೇಶದ ಲಕ್ಷಣ ಎದುರಾಗತೊಡಗಿದೆ’ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ.

ಪಕ್ಷದ 134ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಜಾಥಾದ ಕೊನೆಯಲ್ಲಿ ಮಾತನಾಡಿದ ನಾಯಕರು, ಪೌರತ್ವ (ತಿದ್ದುಪಡಿ) ಕಾಯ್ದೆಯಂತಹ (ಸಿಎಎ) ತಾರತಮ್ಯದಿಂದ ಕೂಡಿರುವ ಕಾಯ್ದೆ ಜಾರಿಗೊಳಿಸುವ ಮೂಲಕ ಸಂವಿಧಾನದ ಆಶಯವನ್ನೇ ಅಲುಗಾಡಿಸಲು ಹೊರಟಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪ್ರಧಾನಿ ಮೋದಿ ಅವರುದೇಶವನ್ನು ಕಿತ್ತು ತಿನ್ನುತ್ತಿರುವ ಯಾವ ಸಮಸ್ಯೆಗಳ ಬಗ್ಗೆಯೂ ಮಾತನಾಡುತ್ತಿಲ್ಲ, ಬದಲಿಗೆಯಾರು ಮೋದಿ ಮೋದಿ ಎಂದು ಜೈಕಾರ ಮಾಡಿದ್ದರೋ, ಅವರಿಗೇ ದ್ರೋಹ ಬಗೆದಿದ್ದಾರೆ, ಇದನ್ನು ಜನ ಹೆಚ್ಚು ದಿನ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಸಿಎಎ ವಿರುದ್ಧದ ಹೋರಾಟ ಇದಕ್ಕೆ ನಿದರ್ಶನ’ ಎಂದರು.

ADVERTISEMENT

ಸಾವರ್ಕರ್‌ ‘ವೀರ’ ಅಲ್ಲ: ‘ಇತಿಹಾಸವನ್ನು ತಿರುಚುವುದೇ ಬಿಜೆಪಿ ಕೆಲಸ, ಅವರಿಗೆ ಸತ್ಯ ಗೊತ್ತೇ ಇಲ್ಲ. ಸಾವರ್ಕರ್ ಅವರಂತೆ ಕಾಂಗ್ರೆಸ್‌ನ ಯಾವ ನಾಯಕರೂ ತಮ್ಮನ್ನು ಬಂಧಿಸಬೇಡಿ, ಪ್ರತಿಭಟನೆ ನಡೆಸುವುದಿಲ್ಲ ಎಂದು ಬ್ರಿಟಿಷರಿಗೆ ಹೇಳಿಲ್ಲ, ಆದರೆ ಬಿಜೆಪಿಯವರು ಮಾತ್ರ ಸಾವರ್ಕರ್ ಅವರಿಗೆ 'ವೀರ' ಪಟ್ಟ ಕೊಟ್ಟಿದ್ದಾರೆ’ ಎಂದು ಸಿದ್ದರಾಮಯ್ಯ ಕುಟುಕಿದರು.

‘ಬಿಜೆಪಿಯಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದವರಿಲ್ಲ. ಆದರೆ ತಾನು ಮಾತ್ರ ಮಹಾನ್‌ ದೇಶಭಕ್ತ ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ’ ಎಂದು ಟೀಕಿದರು.

ನಾಯಕರ ಅಪಹರಣ: ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬನೇ ಒಬ್ಬ ನಾಯಕ ಬಿಜೆಪಿಯಲ್ಲಿ ಇಲ್ಲ, ಅದಕ್ಕಾಗಿ ಜನರಲ್ಲಿ ಗೊಂದಲ ಮೂಡಿಸಲು ಭಗತ್ ಸಿಂಗ್, ಸರ್ದಾರ್ ಪಟೇಲ್, ನೇತಾಜಿ, ಅಂಬೇಡ್ಕರ್ ಮೊದಲಾದವರನ್ನು ಹೆಸರು ಅಪಹರಿಸಿ ತಮ್ಮ ನಾಯಕರೆಂದು ಹೇಳುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಶಾಸಕ ಡಾ.ಜಿ.ಪರಮೇಶ್ವರ್‌ ಅವರು ಸಂವಿಧಾನದ ಪೀಠಿಕೆಯನ್ನು ಪಕ್ಷದ ಕಾರ್ಯಕರ್ತರಿಗೆ ಬೋಧಿಸಿ, ಸರ್ಕಾರದ ಆದ್ಯತೆ ಏನು ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು, ಈಗ ಸಾಗುತ್ತಿರುವ ಪಥ ಗಮನಿಸಿದರೆ ಸಂವಿಧಾನವನ್ನು ಬದಲಿಸುವ ತನ್ನ ಗುಪ್ತ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆತರುವಂತೆ ಕಾಣಿಸುತ್ತಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದು, ಜನರ ಗಮನ ಬೇರೆಡೆಗೆ ಸೆಳೆಯಲು ಧರ್ಮದ ಆಧಾರದಲ್ಲಿ ಸಂವಿಧಾನದ ಆಶಯವನ್ನು ಹತ್ತಿಕ್ಕುವ ಪ್ರಯತ್ನ ಆರಂಭವಾಗಿದೆ, ಇದನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂದರು.

ನಗರ ನಕ್ಸಲರು ಎಂದಿದ್ದಾರೆ: ಏಕೆ ಸುಮ್ಮನಿದ್ದೀರಿ?
‘ಸಿಎಎ ವಿರುದ್ಧ ಹೋರಾಡಿದವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಗರ ನಕ್ಸಲರೆಂದು ಕರೆದಿದ್ದಾರೆ. ಯುವಕರು ಇನ್ನೂ ಯಾಕೆ ಸುಮ್ಮನೆ ಕುಳಿತಿದ್ದಾರೆ?’ ಎಂದು ಶಾಸಕ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

‘ಯುವಕರು, ವಿದ್ಯಾವಂತರು ಬಿಜೆಪಿಯನ್ನು ಆಯ್ಕೆ ಮಾಡಿದ್ದರು. ಆದರೆ ಅವರನ್ನೇ ಪ್ರಧಾನಿ ಅವಮಾನಿಸಿದ್ದಾರೆ. ಜನ ಅವರಿಗೆ ತಕ್ಕ ಉತ್ತರ ನೀಡಬೇಕು. ದೇಶದ ಸದ್ಯದ ಸ್ಥಿತಿ ನೋಡಿದರೆ ಬಿಜೆಪಿಯ ಅಂತ್ಯ ಆರಂಭವಾದಂತೆ ಕಾಣಿಸುತ್ತಿದೆ’ ಎಂದರು.

*
ಯಡಿಯೂರಪ್ಪ ಯಾವತ್ತೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದೇ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 100 ಸ್ಥಾನವೂ ಸಿಗುವುದಿಲ್ಲ.
–ಸಿದ್ದರಾಮಯ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.