
ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರ ಅಷ್ಟು ಸುಲಭವಾಗಿ ಬಿದ್ದು ಹೋಗುತ್ತದೆ ಎಂಬುದರ ಮೇಲೆ ನಾನೇನು ನಂಬಿಕೆ ಇಟ್ಟುಕೊಂಡಿಲ್ಲ, ಆ ಭ್ರಮೆಯಲ್ಲೂ ಇಲ್ಲ. ಏಕೆಂದರೆ ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ಇದ್ದರೂ ಸಿಕ್ಕಿರುವ ಅವಕಾಶದಲ್ಲೇ ಎಷ್ಟು ಬೇಕು ಅಷ್ಟು ದೋಚಬೇಕು ಎಂಬ ಭಾವನೆ ಅವರಲ್ಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ತಾಲ್ಲೂಕಿನ ಕಾಮದೇನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿ, ‘ಆರು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ, ಕ್ರಾಂತಿ ಆಗುತ್ತದೆ ಎಂಬುದಾಗಿ ನಾನು ಎಲ್ಲೂ ಹೇಳಿಲ್ಲ. ಆ ಬಗ್ಗೆ ಹಗಲು ಕನಸು ಕೂಡ ಕಾಣುತ್ತಿಲ್ಲ. ಮುಂದೇನು ನಡೆಯುತ್ತದೆ ಎಂಬುದನ್ನು ಈಗಿನ ರಾಜಕಾರಣದಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಈಗಿನ ಪರಿಸ್ಥಿತಿ ಗಮನಿಸಿದರೆ ಏನು ಬೇಕಾದರೂ ಆಗಬಹುದು, ಈ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮೈಮರೆಯದೆ ಜನರ ಮಧ್ಯೆ ಕೆಲಸ ಮಾಡಿ ಎಂಬುದಾಗಿ ಪಕ್ಷದ ಕಾರ್ಯಕ್ರಮದಲ್ಲಿ ಹೇಳಿದ್ದೇನೆ’ ಎಂದರು.
ಒಕ್ಕಲಿಗ ಶಾಸಕರು ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಏನು ಸಾಧನೆ ಮಾಡಿದರು, ಈ ಬಗ್ಗೆ ಏನಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಒಕ್ಕಲಿಗರಿಗೆ ಮಾತ್ರವಲ್ಲ; ರಾಜ್ಯ ಪ್ರತಿ ಜನರಿಗೆ ಪ್ರಾಧಾನ್ಯ ದೊರಕಬೇಕು. ಏಳು ಕೋಟಿ ಜನರ ಬದುಕನ್ನು ಸರಿಪಡಿಸುವ ಕೆಲಸವನ್ನು ಈ ಸರ್ಕಾರ ಮಾಡಬೇಕು. ಒಂದು ಜಾತಿಗೆ ಸೀಮಿತವಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.