ADVERTISEMENT

ರಾಜ್ಯ ನಾಯಕರಿಗೆ ಪೀಕಲಾಟ; ಕಾಂಗ್ರೆಸ್‌ ಹೈಕಮಾಂಡ್‌ಗೆ ಜೆಡಿಎಸ್‌ ಮೇಲೆ ಪ್ರೀತಿ

ಪಕ್ಷದೊಳಗೆ ಅಸಮಾಧಾನದ ಹೊಗೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 19:30 IST
Last Updated 10 ಜುಲೈ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾ ರದ ವೇಳೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಅವರ ಕುಟುಂಬದವರ ಬಗ್ಗೆ ವೈಯಕ್ತಿಕ ಟೀಕೆ ಮಾಡದಂತೆ ಪಕ್ಷದ ರಾಜ್ಯ ನಾಯಕರಿಗೆ ಕಾಂಗ್ರೆಸ್‌ ಹೈಕಮಾಂಡ್ ನಿರ್ದೇಶನ ನೀಡಿದೆ. ಹೈಕಮಾಂಡ್‌ನ ಜೆಡಿಎಸ್‌ ಪ್ರೀತಿಗೆ ಪಕ್ಷದೊಳಗೇ ಅಸಮಾಧಾನ ವ್ಯಕ್ತವಾಗಿದೆ.

ಚುನಾವಣಾ ತಂತ್ರಗಾರಿಕೆ ಹಾಗೂ ಪಕ್ಷದಲ್ಲಿನ ಕೆಲವು ಗೊಂದಲಗಳನ್ನು ನಿವಾರಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಇತ್ತೀಚೆಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಈ ವೇಳೆ ರಾಹುಲ್‌ ಗಾಂಧಿ ಅವರು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಟೀಕೆ ಮಾಡದಂತೆ ಸೂಚಿಸಿದರು. ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಪಕ್ಷದ ವಿರುದ್ಧ ಒಕ್ಕಲಿಗ ಸಮುದಾಯ ತಿರುಗಿ ಬೀಳಬಹುದು ಎಂಬ ಕಿವಿಮಾತನ್ನೂ ಹೇಳಿದರು ಎಂದು ಪಕ್ಷದ ಹಿರಿಯ ನಾಯಕ
ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದಕ್ಷಿಣ ಕರ್ನಾಟಕದಲ್ಲಿ ದೇವೇಗೌಡರಿಗೆ ದೊಡ್ಡ ಅಭಿ ಮಾನಿ ಬಳಗ ಇದೆ. ಅವರನ್ನು ನಿರಂತರವಾಗಿ ಟೀಕಿಸಿದರೆ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ನ ವಿರುದ್ಧ ನಿಲ್ಲಬಹುದು. 2018ರ ವಿಧಾನ ಸಭಾ ಚುನಾವಣೆಯ ಮಾದರಿಯಲ್ಲೇ ನಾಲ್ಕೈದು ಜಿಲ್ಲೆಗಳಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು’ ಎಂದು ಚುನಾವಣಾ ತಂತ್ರಜ್ಞ ಸುನಿಲ್‌ ಕನಗೋಳ್ ಅವರು ರಾಹುಲ್ ಗಾಂಧಿ ಗಮನಕ್ಕೆ ತಂದರು. ಬಳಿಕ ರಾಹುಲ್‌ ಈ ಸೂಚನೆ ನೀಡಿದರು’ ಎಂದು ಹೇಳಿದರು.

‘ಕರ್ನಾಟಕ ವಿಧಾನಸಭಾ ಚುನಾ ವಣೆಯಲ್ಲಿ ಪಕ್ಷ 100ರಿಂದ 120 ಸ್ಥಾನ ಗೆಲ್ಲಬಹುದು ಎಂದು ಕಾಂಗ್ರೆಸ್‌ ನಡೆಸಿರುವ ಆಂತರಿಕ ಸಮೀಕ್ಷೆ ತಿಳಿಸಿದೆ. ಈಗಿನ ಸನ್ನಿವೇಶದಲ್ಲಿ ಜೆಡಿಎಸ್‌ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಇದೆ. ಒಂದು ವೇಳೆ ಕಾಂಗ್ರೆಸ್‌ ಬಹುಮತ ಗಳಿಸದಿದ್ದರೆ ಜೆಡಿಎಸ್‌ ಜತೆಗೆ ಸ್ನೇಹಹಸ್ತ ಚಾಚಬಹುದು ಎಂಬ ಲೆಕ್ಕಾಚಾರ ಇದೆ. ಹೀಗಾಗಿ, ಜೆಡಿಎಸ್‌ ಬಗ್ಗೆ ನಿರಂತರ ಟೀಕೆ ಮಾಡುವುದರ ಬದಲು ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆಯಂತಹ ವಿಚಾರಗಳ ಕುರಿತು ದೊಡ್ಡ ಮಟ್ಟದ ಹೋರಾಟ ಮಾಡು ವಂತೆ ರಾಹುಲ್‌ ನಿರ್ದೇಶನ ನೀಡಿದರು’ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ ಲೆಕ್ಕಚಾರ

ಬಿಜೆಪಿ ಹಾಗೂ ಜೆಡಿಎಸ್‌ ಅನ್ನು ಸಮಾನ ಎದುರಾಳಿಗಳು ಎಂದು ಭಾವಿಸಿ ಚುನಾವಣೆ ಎದುರಿಸಬೇಕು ಎಂದು ಸಿದ್ದರಾಮಯ್ಯ ಅವರು ಸಭೆಯಲ್ಲೇ ಹೇಳಿದರು.‘ಮಂಡ್ಯ, ಹಾಸನ, ರಾಮನಗರ, ಕೋಲಾರ, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲಿ ನಮ್ಕ್ಷ ಪಕ್ಷಕ್ಕೆಜೆಡಿಎಸ್‌ ನೇರ ಎದುರಾಳಿ. ಜೆಡಿಎಸ್‌ ಬಗ್ಗೆ ಮೃದು ಧೋರಣೆ ತಳೆದರೆ ಈ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಇಲ್ಲಿ ಅಧಿಕಸ್ಥಾನಗಳನ್ನು ಗೆದ್ದರೆ ಮ್ಯಾಜಿಕ್‌ ಸಂಖ್ಯೆ ತಲುಪಲು ಅನುಕೂಲವಾಗುತ್ತದೆ ಎಂದು ಸಿದ್ದರಾಮಯ್ಯ ಅವರುರಾಹುಲ್‌ ಅವರ ಗಮನಕ್ಕೆ ತಂದರು. 2018ರ ವಿಧಾನಸಭಾ ಚುನಾವಣೆಯ ನಂತರ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ಆದ ಹಾನಿಗಳನ್ನೂ ಸಿದ್ದರಾಮಯ್ಯ ವಿವರಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ಪಕ್ಷ ಒಂದೇ ಸ್ಥಾನ ಗೆದ್ದಿತು. ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ ಕನಿಷ್ಠ ಏಳೆಂಟು ಸ್ಥಾನ ಗೆಲ್ಲುತ್ತಿತ್ತು ಎಂಬುದನ್ನು ಮನದಟ್ಟು ಮಾಡಿದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಜೆಡಿಎಸ್‌ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ತಪ್ಪು ಕಲ್ಪನೆ ಇದೆ. ಜಾತ್ಯತೀತ ಪಕ್ಷ ಎಂಬ ಕಾರಣಕ್ಕೆ ಜೆಡಿಎಸ್‌ ಬಗ್ಗೆ ಮೃದುಧೋರಣೆ ಹೊಂದಿದ್ದಾರೆ. ಆದರೆ, ರಾಜ್ಯದ ಸನ್ನಿವೇಶ ವಿಭಿನ್ನವಾಗಿದೆ. ಕನಿಷ್ಠ 30 ಕ್ಷೇತ್ರಗಳಲ್ಲಿ ಜೆಡಿಎಸ್‌ ಜತೆಗೆ ನಾವು ಬಡಿದಾಡಿ ಗೆಲ್ಲಬೇಕು. ಜತೆಗೆ, ಜೆಡಿಎಸ್‌ನ ಕೆಲವು ನಾಯಕರಿಗೆ ಕಾಂಗ್ರೆಸ್‌ಗಿಂತ ಬಿಜೆಪಿ ಮೇಲೆಯೇ ಹೆಚ್ಚು ಪ್ರೀತಿ. ಅದನ್ನು ನಮ್ಮ ರಾಷ್ಟ್ರೀಯ ನಾಯಕರು ಇನ್ನೂ ಅರ್ಥ ಮಾಡಿಕೊಂಡಿಲ್ಲ’ ಎಂದು ಪಕ್ಷದ ಮತ್ತೊಬ್ಬ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.