ADVERTISEMENT

ಹತಾಶೆ ಸ್ಥಿತಿ ತಲುಪಿರುವ ಕಾಂಗ್ರೆಸ್: ಅರುಣ್ ಸಿಂಗ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 12:18 IST
Last Updated 27 ಜನವರಿ 2023, 12:18 IST
   

ಹುಬ್ಬಳ್ಳಿ: ‘ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಜನರನ್ನು ಭ್ರಮೆಗೆ ದೂಡುತ್ತಿರುವ ಕಾಂಗ್ರೆಸ್ ಹತಾಶೆ ಸ್ಥಿತಿಗೆ ತಲುಪಿದೆ. ಚುನಾವಣೆಗೆ ಸೂಕ್ತ ವಿಷಯಗಳಿಲ್ಲದೆ ಬಿಜೆಪಿ ನಾಯಕರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ ಅವಮಾನಿಸುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ಕೊಡಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯೆ ಒಳಗುದ್ದಾಟ ನಡೆಯುತ್ತಿದೆ. ಕುರ್ಚಿಗಾಗಿ ಕಾದಾಡುವವರು ಜನರ ಕಲ್ಯಾಣದ ಬಗ್ಗೆ ಯಾವಾಗ ಯೋಚಿಸುತ್ತಾರೆ?’ ಎಂದು ಟೀಕಿಸಿದರು.

‘ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ದಿನಗಳ ಒಳಗೆ ರೈತರ ಸಾಲ ಮನ್ನಾ, ನಿರುದ್ಯೋಗಿಗಳಿಗೆ ತಿಂಗಳಿಗೆ ₹3,500 ಭತ್ಯೆ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಬಿಡಿಗಾಸು ಮನ್ನಾ ಮಾಡಿಲ್ಲ, ಭತ್ಯೆ ಕೊಟ್ಟಿಲ್ಲ. ಸುಳ್ಳು ಭರವಸೆಗಳನ್ನು ನೀಡುವ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರೆ, ಜನ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದರು.

ADVERTISEMENT

‘ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದೆ. ಪ್ರಧಾನಮಂತ್ರಿ ಗರೀಬ್ ಯೋಜನೆಯಡಿ ಉಚಿತವಾಗಿ ಅಕ್ಕಿ ಕೊಡಲಾಗುತ್ತಿದೆ. 35 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಎಸ್‌ಸಿ ಮತ್ತು ಎಸ್‌ಟಿಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಈ ಸಾಧನೆಗಳಿಂದ ಬಿಜೆಪಿ 150 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜ. 21ರಿಂದ 29ರವರೆಗೆ ಕೈಗೊಂಡಿರುವ ಬೂತ್ ವಿಜಯ ಸಂಕಲ್ಪ ಅಭಿಯಾನ ಯಶಸ್ವಿಯಾಗಿದೆ. ಪಕ್ಷಕ್ಕೆ 1 ಕೋಟಿ ಸದಸ್ಯತ್ವ ಮಾಡುವ ಗುರಿ ಹೊಂದಿದ್ದು, ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಲಾಗುತ್ತಿದೆ. ಚುನಾವಣೆಗೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.