ADVERTISEMENT

ವಿಲ ವಿಲ ಒದ್ದಾಡುತ್ತಿರುವ ಕಾಂಗ್ರೆಸ್ಸಿಗರು: ಪ್ರಲ್ಹಾದ ಜೋಶಿ

ಬಿಜೆಪಿ ರಾಜ್ಯ ಮಟ್ಟದ ‘ಇ ಪ್ರಶಿಕ್ಷಣ’ ಚಿಂತನ ವರ್ಗದಲ್ಲಿ ಪ್ರಲ್ಹಾದ ಜೋಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:31 IST
Last Updated 23 ಜೂನ್ 2021, 19:31 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಜನ್‌ಧನ್‌ ಯೋಜನೆಯಡಿ ದೇಶದ 46 ಕೋಟಿ ಜನರ ಬ್ಯಾಂಕ್‌ ಖಾತೆಗಳನ್ನು ತೆರೆಸಿ ನೇರ ನಗದು ವರ್ಗಾವಣೆ (ಡಿಬಿಟಿ) ಜಾರಿ ಮಾಡಿದ್ದಾರೆ. ಇದು ಒಂದು ರೂಪಾಯಿ ಭ್ರಷ್ಟಾಚಾರವಿಲ್ಲದ ಯೋಜನೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬಿಜೆಪಿ ರಾಜ್ಯ ಮಟ್ಟದ ‘ಇ ಪ್ರಶಿಕ್ಷಣ’ ಚಿಂತನವರ್ಗದಲ್ಲಿ ವೆಬೆಕ್ಸ್‌ ಮೂಲಕ ಅವರು ಮಾತನಾಡಿದರು.

‘ಯುಪಿಎ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕಾಂಗ್ರೆಸ್‌ ಮುಖಂಡರಿಗೆ ಈಗ ಅಧಿಕಾರವಿಲ್ಲದೇ ವಿಲವಿಲ ಒದ್ದಾಡುವಂತಾಗಿದೆ’ ಎಂದರು.

ADVERTISEMENT

ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರೂ ದೇಶದ ಬಡ ಜನರಿಗೆ ಅದರ ಪ್ರಯೋಜನ ಸಿಗಲಿಲ್ಲ. ಪ್ರಧಾನಿ ಮೋದಿಯವರ ಒಂದು ನಿರ್ಧಾರ ಬಡವರ ಬಾಳಿಗೆ ಬೆಳಕಾಯಿತು. ಕಾಂಗ್ರೆಸ್‌ನವರ ಗರೀಬಿ ಹಠಾವೋ ಒಂದು ಘೋಷಣೆಯಾಗಿತ್ತೇ ವಿನಾ ಅದರಿಂದ ಬಡವರ ಏಳಿಗೆ ಆಗಲಿಲ್ಲ. ಅವರ ಅವಧಿಯಲ್ಲಿ ಭ್ರಷ್ಟಾಚಾರ ತಾರಕಕ್ಕೆ ಏರಿತ್ತು ಎಂದು ಅವರು ಟೀಕಿಸಿದರು.

ಒಂದು ದೇಶದಲ್ಲಿ ಎರಡು ಕಾಯ್ದೆ ಇರಬಾರದು ಎಂಬ ಚಿಂತನೆ ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮಪ್ರಸಾದ್‌ ಮುಖರ್ಜಿ ಅವರದಾಗಿತ್ತು. ಅದನ್ನು ಮೋದಿ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೂಲಕ ಈಡೇರಿಸಿದ್ದಾರೆ ಎಂದು ಪ್ರಲ್ಹಾದ ಜೋಶಿ ಅವರುವಿವರಿಸಿದರು.

ಈ ಹಿಂದೆ ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ವಿಮಾನ ನಿಲ್ದಾಣಗಳಿದ್ದವು. ಈಗ ಉಡಾನ್‌ ಯೋಜನೆಯಡಿ ಹುಬ್ಬಳ್ಳಿ, ಬೆಳಗಾವಿ, ತೋರಣಗಲ್‌, ಬೀದರ್‌ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲೂ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭಾಗವಹಿಸಿದ್ದರು.

ರಾಜ್ಯದಲ್ಲಿ 300 ಕಡೆಗಳಲ್ಲಿವೆಬೆಕ್ಸ್‌ ಮೂಲಕ ಚಿಂತನ ವರ್ಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.