
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆಯೇ ನಾಯಕರ ವಿಭಿನ್ನ ಹೇಳಿಕೆಗಳ ಕುರಿತಂತೆ ವ್ಯಂಗ್ಯ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನ ಗಾಳಿ ಬೀಸುತ್ತಿದೆಯೇ? ಎಂದು ಕುಟುಕಿದ್ದಾರೆ.
ಸ್ವಿಟ್ಜರ್‌ಲೆಂಡ್‌ನ ಡಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ‘India is Rising’ ಎಂದು ಹೇಳುತ್ತಿದ್ದಾರೆ. ಜಾಗತಿಕ ನಾಯಕರು, ಹೂಡಿಕೆದಾರರು ಮತ್ತು ಸಂಸ್ಥೆಗಳು ಏನು ಹೇಳುತ್ತಿವೆಯೋ ಖಚಿತವಾಗಿ ಅದರ ಪ್ರತಿಧ್ವನಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದ್ದು ಸತ್ತ ಆರ್ಥಿಕತೆ ಎಂದು ಬಡಬಡಾಯಿಸುತ್ತಿದ್ದಾರೆ ಎಂದು ಅಶೋಕ ವ್ಯಂಗ್ಯ ಮಾಡಿದ್ದಾರೆ.
ಆದರೆ, ಈ ಮಾತುಗಳು ಬಾಯಿತಪ್ಪಿ ಬಂದಂತೆ ಕಾಣುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಬಣ ಹುಟ್ಟಿಕೊಂಡಂತಿದೆ. ಒಬ್ಬೊಬ್ಬರು ಒಂದೊಂದು ರೀತಿ ಮತ್ತು ವಿಭಿನ್ನ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಏಕೆ ಅಸಮಾಧಾನಗೊಂಡಿದ್ದಾರೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಹೈಕಮಾಂಡ್ ನೀಡಿದ್ದ ಅಧಿಕಾರ ಹಂಚಿಕೆ ಭರವಸೆ ಹುಸಿಯಾಗಿದೆ. ಅವರ ತಾಳ್ಮೆಯ ಕಟ್ಟೆ ಒಡೆಯುತ್ತಿದೆ. ಈಗ ಅವರ ಮಾತಿನ ಧಾಟಿ ಬೇರೆಯಾಗಿದ್ದು, ವಾಸ್ತವವನ್ನು ಬಿಂಬಿಸುತ್ತಿದೆ. ರಾಹುಲ್ ಏನನ್ನು ಕೇಳಲು ಬಯಸುವುದಿಲ್ಲವೋ ಅದನ್ನೇ ಡಿಕೆಶಿ ಹೇಳುತ್ತಿದ್ದಾರೆ ಎಂದು ಅಶೋಕ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ದೆಹಲಿ ಘೋಷ ವಾಕ್ಯಗಳನ್ನು ಇಟ್ಟುಕೊಂಡು ಕರ್ನಾಟಕ ರಾಜಕೀಯವನ್ನು ನಡೆಸಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್, ಸೌಮ್ಯವಾಗಿಯೇ ರಾಹುಲ್ ಗಾಂಧಿಗೆ ಹೇಳುತ್ತಿದ್ದಾರೆಯೇ? ಅಥವಾ ರಾಹುಲ್ ಗಾಂಧಿಯವರ ನಿರಾಶಾವಾದಕ್ಕಿಂತ ಮೂಲ ನಿರೂಪಣೆ ಮುಖ್ಯ ಎಂಬುದರ ಸೂಕ್ಷ್ಮ ಸಂಕೇತವೇ ಇದು? ಎಂದು ಕುಟುಕಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಕೇಂದ್ರೀಯ ನಾಯಕರ ಘೋಷವಾಕ್ಯಕ್ಕೆ ತದ್ವಿರುದ್ಧವಾಗಿ ಜಾಗತಿಕ ಮಟ್ಟದಲ್ಲಿ ಹೇಳಿಕೆ ನೀಡುತ್ತಾರೆ ಎಂದರೆ ಇದು ಖಂಡಿತಾ ಆಕಸ್ಮಿಕ ಅಥವಾ ಕಾಕತಾಳೀಯವಲ್ಲ. ಇದು ಸ್ಪಷ್ಟ ಸಂದೇಶ ಎಂದಿದ್ದಾರೆ.
‘ಇವತ್ತು ಮಾತಿನ ಧಾಟಿ ಬದಲಾಗಿದ್ದು, ನಾಳೆ ಬಿರುಗಾಳಿ ಏಳಲಿದೆ’ ಎಂದು ಬರೆದುಕೊಂಡಿದ್ದಾರೆ.
ಡಿಕೆಶಿ ಹೇಳಿದ್ದು..
ಡಾವೋಸ್‌ನಲ್ಲಿ ಎನ್‌ಡಿಟಿವಿ ಜೊತೆ ಮಾತನಾಡಿರುವ ಅವರು, ರಾಜಕಾರಣಿಗಳು, ಉದ್ಯಮಿಗಳು, ಮಾಧ್ಯಮಗಳ ಪ್ರತಿನಿಧಿಗಳಿರಲಿ ಎಲ್ಲರೂ ಇಲ್ಲಿ ಸೇರಿ ಸಂಪೂರ್ಣ ವಿಶ್ವಕ್ಕೆ ಉದ್ಯಮದ ಕಾರ್ಯತಂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಇಡೀ ಜಗತ್ತು ಭಾರತವನ್ನು ನೋಡುತ್ತಿದೆ. ಭಾರತ ಬೆಳೆಯುತ್ತಿದೆ. ಇಂಡಿಯಾ ಶ್ರೇಷ್ಠ ದೇಶ, ಹಲವು ಅವಕಾಶಗಳು ಇವೆ. ನಮ್ಮ ಮಾನವ ಸಂಪನ್ಮೂಲ, ನಮ್ಮ ನಾಲೆಡ್ಜ್ ಕ್ಯಾಪಿಟಲ್ ಬಗ್ಗೆ ಜಗತ್ತಿನ ಜನ ಗಮನ ಹರಿಸುತ್ತಿದ್ದಾರೆ. ವಿಪ್ರೊ, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಮುಂತಾದ ಸಂಸ್ಥೆಗಳು ಬೆಂಗಳೂರಿನ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ ಎಂದಿದ್ದಾರೆ.
ಹಲವು ರಾಜಕೀಯ ಬೆಳವಣಿಗೆ ಹಿನ್ನೆಲೆ ಡಿ.ಕೆ. ಶಿವಕುಮಾರ್ ಬರುತ್ತಾರೊ ಇಲ್ಲವೊ ಎಂಬ ಮಾತು ಕೇಳಿ ಬರುತ್ತಿತ್ತು ಎಂಬ ಖಾಸಗಿ ಮಾಧ್ಯಮ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕೆಲ ಕಾರ್ಯಕ್ರಮಗಳಿದ್ದವು. ಆದರೂ ಅವುಗಳನ್ನು ಮುಂದೂಡಿಕೆ ಮಾಡಿ ಕರ್ನಾಟಕವನ್ನು ಪ್ರತಿನಿಧಿಸಲು ಬಂದಿದ್ದೇನೆ ಎಂದಿದ್ದಾರೆ. ಈ ನಡುವೆ ಡಿಕೆಶಿ ಧರಿಸಿದ್ದ ತೆಳು ಜಾಕೆಟ್ ಅನ್ನು ಗುರುತಿಸಿದ ಮಾಧ್ಯಮ ಸಿಬ್ಬಂದಿ ಈ ಗಾಢ ಚಳಿಗೆ ಇದು ಸೂಕ್ತವಲ್ಲ ಎಂದು ಮತ್ತೊಂದು ಜಾಕೆಟ್ ನೀಡಿದ್ದಾರೆ.
ಕೇಂದ್ರದ ನಾಯಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ
ಈ ನಡುವೆ ಅಧಿಕಾರ ಹಸ್ತಾಂತರ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ನಮ್ಮ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ಇದು ಮಾಧ್ಯಮಗಳಲ್ಲಿ ಚರ್ಚಿಸುವ ವಿಷಯವಲ್ಲ. ನಾನು ಯಾವಾಗಲೂ ಆಶಾವಾದಿಯಾಗಿರುತ್ತೇನೆ. ನಂಬಿಕೆಯಲ್ಲೇ ಜೀವಿಸುತ್ತೇನೆ. ಪರಿಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅದರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನನ್ನ ನಾಯಕರು ನನ್ನನ್ನು ಬೀಳಲು ಬಿಡುವುದಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.