ADVERTISEMENT

ರಾಜಣ್ಣ ವಜಾ: ಪಕ್ಷದ ಆಂತರಿಕ ವಿಷಯ; ಸಿ.ಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 13:51 IST
Last Updated 14 ಆಗಸ್ಟ್ 2025, 13:51 IST
<div class="paragraphs"><p> ಸಿದ್ದರಾಮಯ್ಯ </p></div>

ಸಿದ್ದರಾಮಯ್ಯ

   

ಬೆಂಗಳೂರು: ಕೆ.ಎನ್‌. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನಮ್ಮ ಪಕ್ಷದ ಆಂತರಿಕ ವಿಷಯಗಳನ್ನು ನಿಮಗೆಲ್ಲ ಹೇಳಲು ಸಾಧ್ಯವಿಲ್ಲ’ ಎಂದು ಪ್ರತಿಪಕ್ಷ ನಾಯಕರನ್ನು ಉದ್ದೇಶಿಸಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಸಚಿವ ರಾಜಣ್ಣ ಅವರನ್ನು ಏಕೆ ತೆಗೆದುಹಾಕಿದಿರಿ. ದಲಿತ ನಾಯಕನಿಗೆ ಅನ್ಯಾಯ ಮಾಡುತ್ತಿದ್ದೀರಿ, ಮಾಹಿತಿ ಕೊಡಿ’ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ADVERTISEMENT

‘ಸಭಾನಾಯಕರು ಈ ಬಗ್ಗೆ ಉತ್ತರ ಕೊಡಿಸುವ ಭರವಸೆ ನೀಡಿದ್ದರು’ ಎಂದು ನಾರಾಯಣಸ್ವಾಮಿ ಹೇಳಿದಾಗ, ‘ಸರ್ಕಾರ ಉತ್ತರ ನೀಡಿಯಾಗಿದೆ’ ಎಂದು ಸಭಾನಾಯಕ ಬೋಸರಾಜು ಹೇಳಿದರು.

‘ಈ ಪ್ರಶ್ನೆ ಮೊನ್ನೆ ಪ್ರಸ್ತಾಪವಾದಾಗ, ಅವರನ್ನು ತೆಗೆಯೋದು ಇಟ್ಟುಕೊಳ್ಳೋದು ಸರ್ಕಾರದ ನಿರ್ಧಾರ ಎಂದು ಸಭಾನಾಯಕರು ಹೇಳಿದ್ದಾರೆ. ಅಲ್ಲಿಗೆ ಆ ಪ್ರಕರಣವನ್ನು ಮುಕ್ತಾಯ ಮಾಡಿದ್ದೇನೆ. ಮತ್ತೆ ಅದನ್ನು ಮಾತನಾಡುವಂತಿಲ್ಲ’ ಎಂದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮಂಜುನಾಥ ಭಂಡಾರಿ ಅವರನ್ನು ಪೀಠದಲ್ಲಿ ಕೂರಿಸಿ ಹೊರಟರು.

‘ಉತ್ತರ ನೀಡಲೇಬೇಕು’ ಎಂದು ಬಿಜೆಪಿ ಸದಸ್ಯರು ಒತ್ತಾಯ ಮಾಡುತ್ತಿದ್ದರು. ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಸದನದಿಂದ ಹೊರಡಲು ಸಿದ್ಧರಾದರು. ‘ದಯವಿಟ್ಟು ಪಲಾಯನ ಮಾಡಬೇಡಿ ಮುಖ್ಯಮಂತ್ರಿಯವರೇ’ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ವಾಪಸ್‌ ಬಂದ ಸಿದ್ದರಾಮಯ್ಯ, ‘ಏನು ಮಾತಾಡುತ್ತಾ ಇದ್ದೀರಿ ನೀವು? ನಾವು ನಿಮ್ಮ ಪ್ರಶ್ನೆಗೆ ಉತ್ತರಿಸುವುದಿಲ್ಲ. ಸಭಾನಾಯಕರು ಈಗಾಗಲೇ ಉತ್ತರಿಸಿದ್ದಾರೆ’ ಎಂದರು.

‘ದಲಿತ ನಾಯಕನಿಗೆ ಅನ್ಯಾಯವಾಗಿದೆ. ಇದು ಕಾಂಗ್ರೆಸ್‌ನ ಸಂಸ್ಕೃತಿ’ ಎಂದು ನಾರಾಯಣಸ್ವಾಮಿ ದೂರಿದರು.

ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಅವರು, ‘ಇದು ನಮ್ಮ ಸಂಸ್ಕೃತಿಯಲ್ಲ, ನಿಮ್ಮ ಸಂಸ್ಕೃತಿ. ಧನಕರ್‌ ರಾಜೀನಾಮೆ ಕೊಟ್ಟರಲ್ವಾ, ಚರ್ಚೆ ಮಾಡಿದ್ದೀರಾ? ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟರು, ಯಾರಾದರೂ ಕಾರಣ ಕೊಟ್ಟರಾ? ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಿರಿ; ಯಾಕೆ ಅಂತ ಹೇಳಿದೀರಾ? ಇವೆಲ್ಲ ಪಕ್ಷದ ಆಂತರಿಕ ವಿಷಯಗಳು. ನಿಮಗೆ ಹೇಳಬೇಕಾದ ಅಗತ್ಯ ಇಲ್ಲ’ ಎಂದು ಮೂರು ಬಾರಿ ಎಂದು ಹೇಳಿ ಸದನದಿಂದ ಹೊರಟರು.

‘ದಲಿತ ವಿರೋಧಿ ನೀತಿ, ಪಲಾಯನವಾದ’ ಎಂದು ಬಿಜೆಪಿಯ ಸಿ.ಟಿ. ರವಿ, ರವಿಕುಮಾರ್‌, ಭಾರತಿ ಶೆಟ್ಟಿ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.