ADVERTISEMENT

ಅಕ್ಕಿ, ಕುರಿ, ಕೋಳಿ ಕೊಟ್ಟು ದಲಿತರನ್ನು ಗುಲಾಮರನ್ನಾಗಿಸಿದ ಕಾಂಗ್ರೆಸ್‌: ಕಾರಜೋಳ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 10:39 IST
Last Updated 26 ನವೆಂಬರ್ 2021, 10:39 IST
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ   

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯ ಬಂದಾಗಿನಿಂದ ದಲಿತರನ್ನು ಗುಲಾಮರಂತೆ ನಡೆಸಿಕೊಂಡು ಬಂದಿದ್ದು, ದಲಿತರಿಗೆ ಅಕ್ಕಿ, ಕುರಿ, ಕೋಳಿ ಕೊಟ್ಟು ಸ್ವಾಭಿಮಾನ ಮತ್ತು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ದಲಿತರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ಅವರ ಮನಸ್ಥಿತಿಯೂ ದಲಿತರನ್ನು ಗುಲಾಮರನ್ನಾಗಿ ಇಡುವಂತಹದ್ದೇ. ಇದು ದಲಿತರಿಗೆ ಅವರು ಮಾಡಿರುವ ಅಪಮಾನ ಎಂದು ಅವರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ರಾಷ್ಟ್ರೀಯ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಕಿಡಿಕಾರಿದರು.

ದಲಿತರು ಸದಾ ಕಾಲ ಇವರ ಗುಲಾಮರಾಗಿಯೇ ಇರಬೇಕಾ ? ಅಕ್ಕಿ, ಎಣ್ಣೆ, ಕುರಿ–ಕೋಳಿ ಕೊಟ್ಟು ಸದಾ ಕಾಲ ಮೋಸ ಮಾಡಲು ಆಗುವುದಿಲ್ಲ. ದಲಿತರು ಈಗ ಸುಶಿಕ್ಷಿತರಾಗುತ್ತಿದ್ದಾರೆ. ದಲಿತರು ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಎಂಬ ಕಾಲ ಹೋಗಿದೆ. ಬಿಜೆಪಿಯತ್ತ ಬರುತ್ತಿದ್ದಾರೆ. ದಲಿತರನ್ನು ಸದಾ ಮೋಸ ಮಾಡಲು ಸಾಧ್ಯವಿಲ್ಲ ಎಂದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್‌ ಅವರು ಹುಟ್ಟಿ ಬೆಳೆದ ಮನೆ, ವಾಸದ ಮನೆ ಮತ್ತು ಕಚೇರಿಯನ್ನು ಸ್ಮಾರಕವಾಗಿಸಿ ಸಂರಕ್ಷಿಸುವ ಕೆಲಸಮಾಡಿದ್ದಾರೆ. ವಿದೇಶದಲ್ಲಿ ಅಂಬೇಡ್ಕರ್‌ ವ್ಯಾಸಂಗ ಮಾಡಿದ್ದ ಸಂದರ್ಭದಲ್ಲಿ ಉಳಿದುಕೊಂಡಿದ್ದ ಮನೆಯ ಕಟ್ಟಡವನ್ನೇ ಖರೀದಿಸಿ ಅಲ್ಲಿ ಈಗ ಭಾರತೀಯ ವಿದ್ಯಾರ್ಥಿಗಳು ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಬಾಬಾಸಾಹೇಬರ ನೆನಪು ವಿದ್ಯಾರ್ಥಿಗಳಲ್ಲಿ ಇರಲಿ ಎಂಬ ಆಶಯ ಪ್ರಧಾನಿಯವರದ್ದು ಎಂದು ಹೇಳಿದರು.

ಇನ್ನು ಮೂರು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಅಳಿದು ಹೋಗಲಿದೆ. ಮೋದಿಯವರು ಕಾಲಜ್ಞಾನಿಯಂತೆ ಕಾಂಗ್ರೆಸ್‌ ಮುಕ್ತ ಭಾರತದ ಬಗ್ಗೆ ಹೇಳಿದರು. ಅದೀಗ ನಿಜವಾಗುತ್ತಿದೆ. ಕಾಂಗ್ರೆಸ್‌ ಮುಕ್ತ ಭಾರತವೆಂದರೆ, ಬಿಜೆಪಿ ಮಾತ್ರ ಅಧಿಕಾರದಲ್ಲಿ ಇರುವುದು ಅಂತ ಅಲ್ಲ. ದಲಿತರ ಕಲ್ಯಾಣ, ಸಮಾನತೆ ಮತ್ತು ಈ ವರ್ಗದ ಏಳಿಗೆಯಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಒಂದು ಸಂಘಟನೆ ಆಗಿತ್ತು. ರಾಜಕೀಯ ಪಕ್ಷವಾಗಿರಲಿಲ್ಲ. ಅದರಲ್ಲಿ ಎಲ್ಲ ವಿಚಾರಧಾರೆಯವರೂ ಇದ್ದರು. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ ಕುತಂತ್ರದ ಮೂಲಕ ರಾಜಕೀಯ ಪಕ್ಷವಾಗಿ ಮುಂದುವರೆಯಿತು. ಈಗಿರುವುದು ನಕಲಿ ಕಾಂಗ್ರೆಸ್ ಎಂದು ಹೇಳಿದರು.

‘ಕಾಂಗ್ರೆಸ್‌ ಸುಡುವ ಮನೆ ಇದ್ದ ಹಾಗೆ. ದಲಿತರು ಕಾಂಗ್ರೆಸ್‌ಗೆ ಹೋದರೆ ಬೆಂಕಿಗೆ ಆಹುತಿ ಕೊಟ್ಟ ಹಾಗೆ ಎಂದು ಅಂಬೇಡ್ಕರ್‌ ಅವರು ಎಚ್ಚರಿಕೆ ನೀಡಿದ್ದರು. ಇದು ದಲಿತರಿಗೆ ಅರ್ಥವಾಗುತ್ತಿದೆ’ ಎಂದು ನಾರಾಯಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.