ADVERTISEMENT

ಮತಕ್ಕಾಗಿ ದೇಶದ ಭದ್ರತೆ ಅಡ ಇಡುತ್ತಿರುವ ಕಾಂಗ್ರೆಸ್: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 8:22 IST
Last Updated 28 ಫೆಬ್ರುವರಿ 2024, 8:22 IST
<div class="paragraphs"><p>ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ</p></div>

ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ

   

ಹುಬ್ಬಳ್ಳಿ: ಕೇವಲ ಮತಕ್ಕಾಗಿ ದೇಶದ ಭದ್ರತೆಯನ್ನು ಅಡ ಇಡುವಂತಹ ಕೆಲಸವನ್ನು ರಾಜ್ಯ‌‌ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿ ಅವರು ಮತ ಬ್ಯಾಂಕ್ ಓಲೈಕೆ ರಾಜಕಾರಣದ ಮುಸುಕು ಹಾಕಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬೇರೆ ಏನೂ ಕಾಣಿಸುತ್ತಿಲ್ಲ ಎಂದು ಶಾಸಕ‌ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ವಿಧಾನಸೌಧದ ಕಾರಿಡಾರ್ ನಲ್ಲಿ ವ್ಯಕ್ತಿಯೊಬ್ಬ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ‌ ನಂತರ ದೇಶದ್ರೋಹಿಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದ್ದು, ಅವರಿಗೆ ಧೈರ್ಯ ಬಂದಿದೆ ಎಂದು ಹೇಳಿದರು‌.

ADVERTISEMENT

ವಿಧಾನಸೌಧಕ್ಕೆ ಬಂದು ದೇಶದ್ರೋಹದ ಘೋಷಣೆ ಕೂಗಲು ಈ ಸರ್ಕಾರ ನೀಡಿರುವ ಪ್ರೋತ್ಸಾಹ ಕಾರಣ. ನಮ್ಮ ಸರ್ಕಾರ ಇದ್ದಾಗ ಇಂತಹ ಶಕ್ತಿಗಳನ್ನು ಸದೆಬಡಿದಿದ್ದೆವು ಎಂದರು.

ಕಾಂಗ್ರೆಸ್‌ನವರು ಒಂದು ಕಡೆ ದೇಶವನ್ನು ಒಡೆಯುವ ಮಾತನಾಡುತ್ತಾರೆ, ಇನ್ನೊಂದೆಡೆ ದೇಶದ್ರೋಹಿ ಶಕ್ತಿಗಳಿಗೆ ಕುಮ್ಮಕ್ಕು ನಿಡುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಈ ದೇಶ, ನಾಡನ್ನು ಸುರಕ್ಷಿತವಾಗಿ ಇಡಲು ಸಾಧ್ಯವಿಲ್ಲ. ಅವರು ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.

ಜನ ಎಚ್ಚೆತ್ತುಕೊಂಡು ಎಷ್ಟು ಬೇಗ ಈ ಸರ್ಕಾರವನ್ನು ಕಿತ್ತೊಗೆಯುತ್ತಾರೋ ಅಷ್ಟು ಬೇಗ ಈ ನಾಡು ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ‌‌. ಅದು ಈಗ ಬೇರೆ ಬೇರೆ ರೂಪದಲ್ಲಿ ಕೆಲಸ ಮಾಡುತ್ತಿದೆ. ಈಚೆಗೆ ಹಾನಗಲ್ ನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ ಎಂದರು.

15 ಕ್ಕೂ ಹೆಚ್ಚು ಸ್ಲೀಪರ್ ಸೆಲ್‌ಗಳನ್ನು ನಮ್ಮ ಸರ್ಕಾರ ಇದ್ದಾಗ ಜೈಲಿಗಟ್ಟಿದ್ದೆವು. ಡಿಜೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಮತ್ತು ಮಂಗಳೂರು ಘಟನೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಈಗ ಅಂತಹ ವಾತಾವರಣ ಇಲ್ಲ. ಬಿಲದಲ್ಲಿ ಅಡಗಿ ಕುಳಿತಿದ್ದವರು ಈಗ ಧೈರ್ಯವಾಗಿ ಹೊರಗೆ ಬರುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.